ವಿಶೇಷ ಘಟಕ, ಗಿರಿಜನ ಉಪಯೋಜನೆಗಳಿಗೆ 29,209 ಕೋಟಿ ರೂ. ನಿಗದಿ: ಸಚಿವ ಪ್ರಿಯಾಂಕ್ ಖರ್ಗೆ

Update: 2018-12-14 15:07 GMT

ಬೆಳಗಾವಿ, ಡಿ.14: 2018-19ನೆ ಸಾಲಿನ ಆಯವ್ಯಯದಲ್ಲಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಗಾಗಿ ಒಟ್ಟು 29,209.47 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಶುಕ್ರವಾರ ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಗೋವಿಂದ ಕಾರಜೋಳ ಪ್ರಶ್ನೆಗೆ ಉತ್ತರಿಸಿ ಅವರು, 2018-19ನೆ ಸಾಲಿನ ಆಯವ್ಯಯದಲ್ಲಿ ವಿಶೇಷ ಘಟಕ ಯೋಜನೆಗೆ 20,709.58 ಕೋಟಿ ರೂ. ಹಾಗೂ ಗಿರಿಜನ ಉಪ ಯೋಜನೆಯಡಿ 8500.89 ಕೋಟಿ ರೂ. ಸೇರಿದಂತೆ ಒಟ್ಟು 29,209.47 ಕೋಟಿ ರೂ. ನಿಗದಿಪಡಿಸಲಾಗಿದೆ. ಈ ಪೈಕಿ ಈಗಾಗಲೇ 146.04 ಕೋಟಿ ಬಿಡುಗಡೆ ಮಾಡಲಾಗಿದ್ದು 95.06 ಕೋಟಿ ರೂ ವೆಚ್ಚ ಮಾಡಲಾಗಿದೆ ಎಂದು ವಿವರಿಸಿದರು.

ಈಗಾಗಲೇ ವಿವಿಧ ಇಲಾಖೆಗಳಿಗೆ ಈ ಎರಡೂ ಯೋಜನೆಗಳಡಿ ಅನುದಾನ ನಿಗದಿಗೊಳಿಸಿ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಈ ಹಂತದಲ್ಲಿ ಅನುದಾನವನ್ನು ಬೇರೊಂದು ಉದ್ದೇಶಕ್ಕೆ ಬಳಸಲು ಅವಕಾಶವಿರುವುದಿಲ್ಲ. ಭೂ-ಒಡೆತನ ಯೋಜನೆಯಡಿ ಈಗಾಗಲೇ ಡಾ ಬಿ. ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಭೂ ಒಡೆತನ ಯೋಜನೆಗೆ ಅನುದಾನವನ್ನು ಮೀಸಲಿರಿಸಲಾಗಿದೆ ಎಂದು ಉಪ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ರಾಜ್ಯಾದ್ಯಂತ ಭೂ ಒಡೆತನ ಯೋಜನೆಯಡಿ ಡಾ ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ 2016-17ನೆ ಸಾಲಿನಿಂದ 2018-19ನೆ ಸಾಲಿನವರೆಗೆ ಒಟ್ಟು 3302 ಫಲಾನುಭವಿಗಳಿಗೆ 4118.36 ಎಕರೆ ಭೂಮಿಯನ್ನು ಖರೀದಿಸಲಾಗಿದೆ. ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ 2016-17 ಮತ್ತು 2017-18ನೆ ಸಾಲಿನಲ್ಲಿ 514 ಫಲಾನುಭವಿಗಳಿಗೆ 601.09 ಎಕರೆ ಭೂಮಿಯನ್ನು ಖರೀದಿಸಲಾಗಿದೆ ಎಂದು ಸಚಿವರು ಅಂಕಿ-ಅಂಶಗಳನ್ನು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News