ಬಾಲಕಿಯ ಅಪಹರಿಸಿ, ಅತ್ಯಾಚಾರ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

Update: 2018-12-14 16:55 GMT

ಕಲಬುರಗಿ, ಡಿ.14: ಪ್ರೀತಿಸುವುದಾಗಿ ಪುಸಲಾಯಿಸಿ ಬಾಲಕಿಯನ್ನು ಅಪಹರಿಸಿ ಲೈಂಗಿಕವಾಗಿ ಬಳಸಿಕೊಂಡ ಆರೋಪಿಗೆ ಕಲುಬುರಗಿ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ಎರಡು ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

ಆಳಂದ ತಾಲೂಕಿನ ಇಕ್ಕಳಕಿ ಗ್ರಾಮದ ಬಸವರಾಜ ಪುರಾಣೆ ಶಿಕ್ಷೆಗೆ ಗುರಿಯಾದವನು. ಬಸವರಾಜ 2015ರ ನವೆಂಬರ್ 22ರ ರಾತ್ರಿ ಇದೇ ಗ್ರಾಮದ 15 ವರ್ಷದ ಬಾಲಕಿಯನ್ನು ಬಲವಂತವಾಗಿ ಅಪಹರಿಸಿಕೊಂಡು ನೆರೆಯ ಮಹಾರಾಷ್ಟ್ರದ ದುಧನಿ, ಸೋಲಾಪುರಕ್ಕೆ ಕರೆದುಕೊಂಡು ಹೋಗಿದ್ದ. ಆಗ ಮದುವೆ ಮಾಡಿಕೊಳ್ಳೋಣ ಎಂದು ಪುಸಲಾಯಿಸಿ ಅತ್ಯಾಚಾರವೆಸಗಿದ್ದ ಎನ್ನಲಾಗಿದ್ದು, ಈ ಕುರಿತು ಅಂದಿನ ಆಳಂದ ಸಿಪಿಐ ಬಾಸು ಚವ್ಹಾಣ್ ತನಿಖೆ ಮಾಡಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಕಲಬುರಗಿ 2ನೆ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಗೋಪಾಲಪ್ಪಎಸ್. ಅವರು ವಾದ ಪ್ರತಿವಾದವನ್ನು ಆಲಿಸಿ, ಆರೋಪಿ ಎಸಗಿರುವ ಅಪರಾಧ ಸಾಬೀತಾಗಿರುವ ಹಿನ್ನೆಲೆಯಲ್ಲಿ ಜೈಲುವಾಸ ಮತ್ತು ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ನೊಂದ ಬಾಲಕಿಗೆ ಜಿಲ್ಲಾ ಕಾನೂನು ನೆರವು ಸಮಿತಿಯಿಂದ 5 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶ ನೀಡಲಾಗಿದೆ. ಒಂದು ವೇಳೆ ಆರೋಪಿ ದಂಡದ ಹಣ ಸಂದಾಯ ಮಾಡಿದಿದ್ದಲ್ಲಿ ಬಾಲಕಿಗೆ ಹೆಚ್ಚುವರಿಯಾಗಿ 1.50 ಲಕ್ಷ ರೂ. ಪರಿಹಾರ ನೀಡಬೇಕೆಂದು ನ್ಯಾಯಾಧೀಶರು ತೀರ್ಪಿನಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News