ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್ ಅಳವಡಿಕೆಯಿಂದ 580 ಕೋಟಿ ಉಳಿತಾಯ: ಸಚಿವ ಝಮೀರ್

Update: 2018-12-14 17:53 GMT

ಬೆಳಗಾವಿ, ಡಿ.14: ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್ ಅಳವಡಿಸಿರುವ್ಯದರಿಂದ ರಾಜ್ಯ ಸರಕಾರಕ್ಕೆ 580ಕೋಟಿ ರೂ.ಉಳಿತಾಯವಾಗಿದೆ ಎಂದು ಆಹಾರ ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದರು.

ಶುಕ್ರವಾರ ವಿಧಾನಪರಿಷತ್‍ನಲ್ಲಿ ಬಿಜೆಪಿ ಸದಸ್ಯ ರಘುನಾಥ್ ಮಲ್ಕಾಪೂರೆ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ 20,013 ನ್ಯಾಯಬೆಲೆ ಅಂಗಡಿಗಳಿದ್ದು, 19 ಸಾವಿರಕ್ಕೂ ಅಧಿಕ ಅಂಗಡಿಗಳಲ್ಲಿ ಬಯೋಮೆಟ್ರಿಕ್ ಅಳವಡಿಸಲಾಗಿದೆ. ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಿದರೆ ಬಿಪಿಎಲ್ ಕಾರ್ಡ್‍ನ್ನು ರದ್ದು ಮಾಡಲು ಸೂಚನೆ ನೀಡಲಾಗಿದೆ ಎಂದರು.

'ಬಯೋಮೆಟ್ರಿಕ್ ಅಳವಡಿಸಿದರೂ, ಬಡವರ ಅಕ್ಕಿ ಬೀದರ್ ಜಿಲ್ಲೆಯ ಗೋದಾಮುಗಳಲ್ಲಿ ಅನಧಿಕೃತವಾಗಿ ಶೇಖರಿಸಿಟ್ಟಿದ್ದಾರೆ. ಗೋದಾಮು ಮೇಲೆ ಜಿಲ್ಲಾಧಿಕಾರಿ ದಾಳಿ ಮಾಡಿದ್ದು, ಅನ್ನಭಾಗ್ಯದಲ್ಲಿ ಪಾರದರ್ಶಕತೆ ಇಲ್ಲ ಎಂದು ಬಿಜೆಪಿ ಸದಸ್ಯ ರಘುನಾಥ ರಾವ ಮಲ್ಕಾಪುರ್ ಆರೋಪಿಸಿದರು.

ಪ್ರಶ್ನೋತ್ತರ ವೇಳೆ ಮಾತನಾಡಿದ ಅವರು, ಅನ್ನಭಾಗ್ಯದ ಅಕ್ಕಿ ಕಾಳಸಂತೆಯಲ್ಲಿ ಸಿಗುತ್ತಿವೆ. ಗೋದಾಮುಗಳಲ್ಲಿ ಶೇಖರಣೆ ಮಾಡುತ್ತಿದ್ದು, ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಸರಕಾರ ಮಾಡುತ್ತಿರುವುದೇನು? ಬಡವರ ಅಕ್ಕಿ ಶ್ರೀಮಂತರ ಪಾಲಾಗುತ್ತಿವೆ. ಈ ಬಗ್ಗೆ ಸರ್ಕಾರ ಚಿಂತಿಸಿದೆಯಾ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಝಮೀರ್, ರಾಜ್ಯದಲ್ಲಿ ಅನ್ನಭಾಗ್ಯ ಅಕ್ಕಿ ದುರುಪಯೋಗವಾದ ಬಗ್ಗೆ 81 ಎಫ್‍ಐಆರ್ ದಾಖಲಿಸಲಾಗಿದೆ. ಬೀದರ್ ನಲ್ಲಿ ನಡೆದಿರುವ ಪ್ರಕರಣದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಳಿ ಚರ್ಚಿಸಿ ಮುಂದಿನ ನಿರ್ಣಯ ಕೈಗೊಳ್ಳಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News