ಎಡಿಜಿಪಿ ರಾಘವೇಂದ್ರ ಔರಾದ್ಕರ್ ವರದಿ ಶೀಘ್ರ ಅನುಷ್ಟಾನ: ಡಾ.ಜಿ.ಪರಮೇಶ್ವರ್

Update: 2018-12-14 18:13 GMT

ಬೆಂಗಳೂರು, ಡಿ.14: ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ವೇತನ, ಭತ್ಯೆ ಪರಿಷ್ಕರಣೆಗೆ ಸಂಬಂಧಿಸಿದ ಎಡಿಜಿಪಿ ರಾಘವೇಂದ್ರ ಔರಾದ್ಕರ್ ವರದಿಯನ್ನು ಶೀಘ್ರವೆ ಅನುಷ್ಟಾನಕ್ಕೆ ತರಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಶುಕ್ರವಾರ ವಿಧಾನಪರಿಷತ್‍ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಪ್ರಾಣೇಶ್ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೆ ರಾಘವೇಂದ್ರ ಔರಾದ್ಕರ್ ವರದಿಯಲ್ಲಿ ಸೂಚಿಸಿರುವಂತೆ ಪ್ರತಿ ತಿಂಗಳು ಎರಡು ಸಾವಿರ ರೂ.ಭತ್ಯೆ ನೀಡಲಾಗುತ್ತಿದೆ ಎಂದರು. ಇನ್ನು ಪೊಲೀಸ್ ಸಿಬ್ಬಂದಿಗಳ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಪರಿಶೀಲನೆಗಾಗಿ ಆರ್ಥಿಕ ಇಲಾಖೆಗೆ ಕಳುಹಿಸಲಾಗಿದೆ. ಅಲ್ಲಿಂದ ವರದಿ ಬಂದ ನಂತರ ಔರಾದ್ಕರ್ ವರದಿಯನ್ನು ಸಂಪೂರ್ಣ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಮಹಿಳಾ ಪೊಲೀಸ್ ಸಮವಸ್ತ್ರ ವಿನಾಯಿತಿ: ಬಿಜೆಪಿ ಸದಸ್ಯೆ ತೇಜಸ್ವಿನಿ ರಮೇಶ್ ಮಾತನಾಡಿ, ಮಹಿಳಾ ಸಿಬ್ಬಂದಿಗಳ ಸಮವಸ್ತ್ರದಲ್ಲಿ ಏಕಮುಖ ಅಭಿಪ್ರಾಯಬೇಡ. ಹಿರಿಯ ಮಹಿಳಾ ಸಿಬ್ಬಂದಿಗಳು ಪ್ಯಾಂಟ್, ಶರ್ಟ್ ಸಮವಸ್ತ್ರ ಧರಿಸುವುದಕ್ಕೆ ಕಷ್ಟ ಆಗುತ್ತದೆ. ಹೀಗಾಗಿ ಕಡ್ಡಾಯಗೊಳಿಸುವುದು ಬೇಡವೆಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, 40ವರ್ಷ ಮೇಲ್ಪಟ್ಟ ಮಹಿಳಾ ಪೊಲೀಸ್ ಸಿಬ್ಬಂದಿಗಳಿಗೆ ಪ್ಯಾಂಟ್-ಶರ್ಟ್ ಕಡ್ಡಾಯಗೊಳಿಸುವುದಿಲ್ಲ. ಅವರು ಚೂಡಿದಾರ ಇಲ್ಲವೆ ಸೀರೆ ಧರಿಸಲು ಅವಕಾಶವಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News