ನನಗೆ ತುಂಡರಿಸುವುದು ಹೇಗೆಂದು ಗೊತ್ತು ಎಂದು ಖಶೋಗಿ ಹಂತಕ ಹೇಳಿದ್ದ: ಟರ್ಕಿ ಅಧ್ಯಕ್ಷ ಎರ್ದೊಗಾನ್

Update: 2018-12-15 09:11 GMT

ಇಸ್ತಾಂಬುಲ್, ಡಿ.15: “ನನಗೆ ತುಂಡರಿಸುವುದು ಹೇಗೆಂದು ಗೊತ್ತು'' ಎಂದು ಸೌದಿ ಪತ್ರಕರ್ತ ಜಮಾಲ್ ಖಶೋಗಿಯವರ ಹಂತಕರಲ್ಲೊಬ್ಬ ಹೇಳುತ್ತಿರುವ ಧ್ವನಿಮುದ್ರಿಕೆಯನ್ನು ಟರ್ಕಿಯು ಅಮೆರಿಕಾ ಮತ್ತು ಯುರೋಪ್ ಅಧಿಕಾರಿಗಳಿಗೆ ನೀಡಿದೆ ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಹೇಳಿದ್ದಾರೆ.

ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಅವರ ಕಟು ಟೀಕಾಕಾರರಾಗಿದ್ದ ಖಶೋಗಿಯನ್ನು ಇಸ್ತಾಂಬುಲ್ ನ ಸೌದಿ ಕಾನ್ಸುಲೇಟ್ ಕಚೇರಿಯಲ್ಲಿ ಹೇಗೆ ಹತ್ಯೆಗೈಯ್ಯಲಾಗಿತ್ತು ಎಂಬ ಬಗ್ಗೆ ರಿಯಾಧ್ ನ ಬದಲಾಗುತ್ತಿರುವ ಹೇಳಿಕೆಗಳನ್ನೂ ಎರ್ದೊಗಾನ್ ಟೀಕಿಸಿದ್ದಾರೆ. ತಮ್ಮ ವಿವಾಹಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಲು ಖಶೋಗಿ ಹೋಗಿದ್ದಾಗ ಅವರ ಹತ್ಯೆ ನಡೆದಿತ್ತು.

“ಅಮೆರಿಕಾ, ಜರ್ಮನಿ, ಫ್ರಾನ್ಸ್, ಕೆನಡಾ ಎಲ್ಲರೂ ಈ ಧ್ವನಿಮುದ್ರಿಕೆಯನ್ನು ಕೇಳುವಂತೆ ಮಾಡಿದ್ದೇವೆ, ಆ ವ್ಯಕ್ತಿ ಸ್ಪಷ್ಟವಾಗಿ ‘ನನಗೆ ಹೇಗೆ ಕಟ್ ಮಾಡಬೇಕೆಂದು ಗೊತ್ತು’ ಎಂದು ಹೇಳುತ್ತಿದ್ದಾನೆ'' ಎಂದು ಎರ್ದೊಗಾನ್ ಹೇಳಿದರು. ಧ್ವನಿಮುದ್ರಿಕೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಅವರು ನೀಡಿಲ್ಲ.

ಖಶೋಗಿ ಹತ್ಯೆಯ ಬಗ್ಗೆ ರಿಯಾದ್ ಹೇಳಿಕೆಗಳು ಬದಲಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಟರ್ಕಿ ಅಧ್ಯಕ್ಷ, “ಖಶೋಗಿ ಕಾನ್ಸುಲೇಟ್ ಕಚೇರಿಯಿಂದ ಹೊರ ಬಂದಿದ್ದರು ಎಂದು ಮೊದಲು ಹೇಳಲಾಗಿತ್ತು. ಆದರೆ ಅವರನ್ನು ವಿವಾಹವಾಗಲಿದ್ದ ಟರ್ಕಿ ಮೂಲದ ಮಹಿಳೆ ಅದನ್ನು ನಿರಾಕರಿಸಿದ್ದರು, ಖಶೋಗಿಗಾಗಿ ಕಟ್ಟಡದ ಹೊರಗೆ ಕಾದಿದ್ದ ಆಕೆ, ಅವರು ಹೊರ ಬರಲೇ ಇಲ್ಲ ಎಂದು ಹೇಳಿದ್ದಾರೆ.  ಖಶೋಗಿ ಕಾನ್ಸುಲೇಟ್ ಕಚೇರಿಯಿಂದ ಹೊರಬಂದಿದ್ದಾಗಿ ರಾಜಕುಮಾರ ಹೇಳಿದ್ದಾರೆ, ಖಶೋಗ್ಗಿ ಮಗುವೇನು?, ಜಗತ್ತು ಮೂಕವಾಗಿದೆ ಎಂದು ಅವರು ಅಂದುಕೊಂಡಿದ್ದಾರೆ. ಈ ದೇಶ ಮೂಕವಲ್ಲ, ಜನರನ್ನು ಹೇಗೆ ಜವಾಬ್ದಾರರನ್ನಾಗಿಸುವುದು ಎಂದು ಅದಕ್ಕೆ ತಿಳಿದಿದೆ,'' ಎಂದು ಎರ್ದೊಗಾನ್ ಹೇಳಿದರು.

ಈ ಪ್ರಕರಣವನ್ನು ಕೈಬಿಡುವುದಿಲ್ಲ ಎಂದು ಅವರು ಈಗಾಗಲೇ ಪುನರುಚ್ಛರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News