ಸುಪ್ರೀಂ ಕೋರ್ಟ್ ಗೆ ಖರ್ಗೆ ಅಫಿದಾವಿತ್ ಅಥವಾ ಮರು ಪರಿಶೀಲನಾ ಅರ್ಜಿ ಸಲ್ಲಿಸಲಿ: ಸುಬ್ರಮಣಿಯನ್ ಸ್ವಾಮಿ

Update: 2018-12-15 08:46 GMT

ಹೊಸದಿಲ್ಲಿ, ಡಿ.15: ತಮಗೆ ರಫೇಲ್ ಒಪ್ಪಂದದ ಕುರಿತಾದ ಸಿಎಜಿ ವರದಿ ದೊರೆತಿಲ್ಲ ಹಾಗೂ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ (ಪಿಎಸಿ) ಅದನ್ನು ಪರೀಶೀಲಿಸಿಲ್ಲವೆಂದು ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸುಪ್ರೀಂ ಕೋರ್ಟಿನಲ್ಲಿ ಅಫಿದಾವಿತ್ ಅಥವಾ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕೆಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಸಿಎಜಿ ವರದಿಯನ್ನು ಸದನದಲ್ಲಿ ಹಾಗೂ ಪಿಎಸಿ ಮುಂದಿರಿಸಿದ್ದಾಗ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ ಮುಂದೆ ಸುಳ್ಳು ಹೇಳಿದೆ ಎಂದು ಖರ್ಗೆ ನೀಡಿದ ಹೇಳಿಕೆ ಬೆನ್ನಲ್ಲೇ ಸ್ವಾಮಿ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.

``ಹೌದು ಅವರಿಗೆ (ಖರ್ಗೆ) ಅದು ದೊರೆತಿಲ್ಲವೆಂದಾದರೆ ಅವರ ಮಾತನ್ನು ನಾವು ಕೇಳಬೇಕು. ತಮಗೆ ಸಿಎಜಿ ವರದಿ ದೊರಕಿಲ್ಲ  ಹಾಗೂ ಸಮಿತಿ ಅದನ್ನು ಪರೀಶೀಲಿಸಿಲ್ಲ ಎಂದು ಅವರು ಸುಪ್ರೀಂ ಕೋರ್ಟಿನಲ್ಲಿ ಅಫಿದಾವಿತ್ ಸಲ್ಲಿಸಬೇಕು. ಅದರಲ್ಲೇನಿದೆ ಎಂದು ನಮಗೆ ತಿಳಿದಿಲ್ಲ. ಅವರನ್ನು ಹೆಸರಿಸಲಾಗಿರುವುದರಿಂದ ಅವರಿಗೆ ಅಫಿದಾವಿತ್ ಸಲ್ಲಿಸಲು ಎಲ್ಲಾ ಹಕ್ಕು ಇದೆ'' ಎಂದು ಸ್ವಾಮಿ ಹೇಳಿದ್ದಾರೆ.

``ಈ ವಿಚಾರ ತೀರ್ಪಿನ ಮೇಲೆ ಯಾವುದೇ ಪರಿಣಾಮ ಬೀರುವುದೇ ಅಥವಾ ಇಲ್ಲವೇ ಎಂದು ನನಗೆ ಹೇಳಲು ಸಾಧ್ಯವಿಲ್ಲ, ನ್ಯಾಯಾಧೀಶರು ಮಾತ್ರ ಇದನ್ನು  ಹೇಳಬಹುದು. ಆದರೆ ದಾಖಲೆಗಳನ್ನು ಸರಿಪಡಿಸಿಕೊಳ್ಳಬೇಕಿದೆ ಎಂದು ನನಗನಿಸುತ್ತದೆ,'' ಎಂದು ಅವರು ತಿಳಿಸಿದರು.

ಪಿಎಸಿಯ ಇತರ ಸದಸ್ಯರ ಬಳಿಯೂ ಈ ವಿಚಾರ ಎತ್ತುವುದಾಗಿ ಖರ್ಗೆ ಈಗಾಗಲೇ ಹೇಳಿದ್ದಾರಲ್ಲದೆ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಹಾಗು ಸಿಎಜಿಯನ್ನು ಕರೆಸಲಾಗುವುದು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News