ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಕರೆ

Update: 2018-12-15 14:01 GMT

ಕಲಬುರಗಿ, ಡಿ.15: ವಿದ್ಯಾರ್ಥಿಗಳು ಕೇವಲ ಓದಿನ ಬಗ್ಗೆ ಗಮನ ಕೊಡದೆ ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಂಡು ಮುಂದುವರೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯ ಪಟ್ಟಿದ್ದಾರೆ.

ಶನಿವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರಾಜ್ಯ ವಿಜ್ಞಾನ ಪರಿಷತ್, ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾಡಳಿತ, ಕರಾವಿಪಿ ಜಿಲ್ಲಾ ಸಮಿತಿ, ಗುಲಬರ್ಗಾ ವಿವಿ ಸಹಯೋಗದಲ್ಲಿ ಆಯೋಜಿಸಿರುವ ಮೂರು ದಿನಗಳ 26ನೆ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಯಶಸ್ಸು ಸಾಧಿಸಬೇಕಾದರೆ ಮೂರು ಪ್ರಮುಖ ಅಂಶಗಳನ್ನು ಅಳವಡಿಸಿಕೊಳ್ಳಬೇಕು. ಯಾವುದೇ ವಿಷಯದ ಬಗ್ಗೆ ಕುತೂಹಲ ಬೆಳೆಸಿಕೊಂಡು, ಪ್ರಶ್ನೆ ಕೇಳುವ ಮೂಲಕ ಉತ್ತರ ಕಂಡುಕೊಳ್ಳಬೇಕು ಹಾಗೂ ಮಾಡಿದ ತಪ್ಪಿನ ಬಗ್ಗೆ ಮತ್ತು ವೈಫಲ್ಯದ ಬಗ್ಗೆ ಹೆದರಿಕೆಯಿಲ್ಲದೇ ಮುಂದುವರೆದಾಗ ಮಾತ್ರ ಯಶಸ್ಸು ಸಾಧ್ಯ ಎಂದು ಅವರು ಹೇಳಿದರು.

ಪ್ರಪಂಚದ ಹೆಸರಾಂತ ವಿಜ್ಞಾನಿಗಳಾದ ಸರ್ ಥಾಮಸ್ ಎಡಿಸನ್ ಹಾಗೂ ಸರ್‌ಸಿ.ವಿ.ರಾಮನ್ ಅವರ ಉದಾಹರಣೆ ನೀಡಿದ ಸಚಿವರು, ಈ ಇಬ್ಬರು ಮಹನೀಯರು ಹಲವಾರು ಬಾರಿ ವೈಫಲ್ಯತೆ ಕಂಡರು ಕೂಡ ಛಲಬಿಡದೆ ತಾವು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಸತತ ಪ್ರಯತ್ನ ಮಾಡಿದ್ದರಿಂದ ಯಶಸ್ಸು ಕಂಡರು. ಅದೇ ರೀತಿ ವಿದ್ಯಾರ್ಥಿಗಳು ಕೂಡ ಸೋಲಿನ ಬಗ್ಗೆ ಹೆಚ್ಚಿನ ಭಯ ಪಡದೆ ಸತತ ಪ್ರಯತ್ನ ಮಾಡುವ ಮೂಲಕ ಯಶಸ್ಸು ಸಾಧಿಸಬೇಕು ಎಂದು ಕರೆ ನೀಡಿದರು.

ರಾಜ್ಯ ಸರಕಾರ ಶೈಕ್ಷಣಿಕ ಕ್ಷೇತ್ರದ ಉತ್ತೇಜನಕ್ಕೆ ತೆಗೆದುಕೊಂಡ ಕ್ರಮಗಳನ್ನು ವಿವರಿಸಿದ ಅವರು, ಮೊಟ್ಟಮೊದಲ ಬಾರಿಗೆ ಪದವಿ ಪೂರ್ವ ವಿದ್ಯಾರ್ಥಿಗಳು ಹೆಚ್ಚಿನ ವ್ಯಾಸಂಗಕ್ಕಾಗಿ ವಿದೇಶಗಳಿಗೆ ತೆರಳಲು ಧನ ಸಹಾಯ ಮಾಡುವ ಪ್ರಬುದ್ಧ ಯೋಜನೆ ಜಾರಿಗೆ ತರಲಾಗಿದ್ದು ಬಡ ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಳ್ಳಬೇಕು ಎಂದರು.

ಪ್ರಸಕ್ತ ಸಂದರ್ಭದಲ್ಲಿ ವಿದ್ಯಾರ್ಥಿಗಳು ಉದ್ಯೋಗ ಪಡೆದುಕೊಳ್ಳುವಂತೆ ಶಿಕ್ಷಣ ಆಯ್ಕೆ ಮಾಡಿಕೊಳ್ಳಬೇಕು. ಪ್ರಗತಿಪರ ವಿಚಾರಗಳನ್ನು ಹೊಂದಿದ ವಿದ್ಯಾರ್ಥಿಗಳು ಸಮಾಜಕ್ಕೆ ರಾಜ್ಯಕ್ಕೆ ರಾಷ್ಟ್ರಕ್ಕೆ ಮಾದರಿಯಾಗಬಲ್ಲರು. ಅಂತಹ ವಿದ್ಯಾರ್ಥಿಗಳಿಗೆ ಸರಕಾರ ಸಂಪೂರ್ಣ ನೆರವು ನೀಡಲಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಕಾರ್ಯಕ್ರಮದಲ್ಲಿ ಕಲಬುರ್ಗಿ ಮಹಾನಗರ ಪಾಲಿಕೆ ಮೇಯರ್ ಮಲ್ಲಮ್ಮ ಎಸ್.ವಳಕೇರಿ, ಶಾಸಕ ಬಸವರಾಜ ಮತ್ತಿಮೂಡ, ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್, ಕುಲಪತಿ ಆರ್.ನಿರಂಜನ್, ಹುಲಿಕಲ್ ನಟರಾಜ್, ಎಸ್.ವಿ.ಸಂಕನೂರು, ಶರಣಗೌಡ ಮಾಲೀಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News