ಮಂಡ್ಯ: ದುಷ್ಕರ್ಮಿಗಳಿಂದ ರಾತ್ರೋರಾತ್ರಿ ಮನೆ ಧ್ವಂಸ

Update: 2018-12-15 14:59 GMT

ಮಂಡ್ಯ, ಡಿ.15: ರಾತ್ರೋರಾತ್ರಿ ಮನೆಯೊಂದರ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳು ಸೈಜುಗಲ್ಲಿನಿಂದ ಮನೆಯ ಬಾಗಿಲು ಮತ್ತು ಕಿಟಕಿಯ ಗಾಜುಗಳನ್ನು ಒಡೆದು ಹಾಕಿರುವ ಘಟನೆ ಪಾಂಡವಪುರ ತಾಲೂಕಿನ ಬಿಂಡಹಳ್ಳಿ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

ಬಿಂಡಹಳ್ಳಿ ಗ್ರಾಮದಲ್ಲಿ ಮರದ ವ್ಯಾಪಾರ ಮಾಡುವ ಶ್ರೀನಿವಾಸಾಚಾರಿ ಎಂಬುವವರ ಮನೆಯೇ ದುಷ್ಕರ್ಮಿಗಳ ದಾಳಿಗೆ ತುತ್ತಾಗಿದ್ದು, ಇದೇ ಗ್ರಾಮದ ಸುಬ್ಬಾಚಾರಿ ಮಕ್ಕಳಾದ ನಂಜುಂಡಾಚಾರಿ ಮತ್ತು ಮಂಜು, ಹಾಗೂ ಗೋವಿಂದಾಚಾರಿ ಮಗ ಚಲುವಾಚಾರಿ ಎಂಬುವರೇ ಕಿಟಕಿ ಬಾಗಿಲು ಒಡೆದು ಹಾಕಿ, ಪುಂಡಾಟಿಕೆ ನಡೆಸಿದ ವ್ಯಕ್ತಿಗಳಾಗಿದ್ದಾರೆ ಎಂದು ಶ್ರೀನಿವಾಸಾಚಾರಿ ಅವರ ಹೆಂಡತಿ ಅನುಸೂಯ ಶ್ರೀರಂಗಪಟ್ಟಣ ಡಿವೈಎಸ್‍ಪಿ ಅವಗೆ ದೂರು ನೀಡಿದ್ದಾರೆ.

ದಾಳಿಗೆ ಕಾರಣ: ಬಿಂಡಹಳ್ಳಿ ಗ್ರಾಮದ ಶ್ರೀನಿವಾಸಾಚಾರಿ ಮಗ ಸುನೀಲ್‍ ಕುಮಾರ್ (24) ಮೈಸೂರಿನ ಎಚ್‍ಡಿಎಫ್‍ಸಿ ಬ್ಯಾಂಕ್ ಉದ್ಯೋಗಿಯಾಗಿದ್ದು, ಮೈಸೂರಿನ ಮೇಟಗಳ್ಳಿ ಬಡಾವಣೆಯಲ್ಲಿ ವಾಸಿಸುತ್ತಿರುವ ಇದೇ ಗ್ರಾಮದ ಪ್ರಾಪ್ತ ವಯಸ್ಸಿನ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದರು. ಶುಕ್ರವಾರ ಬೆಳಗ್ಗೆಯಿಂದ ಯುವತಿ ನಾಪತ್ತೆಯಾಗಿರುವ ಕಾರಣ ಸುನೀಲ್‍ ಕುಮಾರ್ ಈಕೆಯನ್ನು ಕರೆದುಕೊಂಡು ಹೋಗಿದ್ದಾನೆ ಎಂಬುದು ದಾಳಿಕೋರರ ಆರೋಪವಾಗಿದೆ.

ಘಟನೆ ನಡೆದ ರಾತ್ರಿ ಶ್ರೀನಿವಾಸಾಚಾರಿ ಮನೆಯಲ್ಲಿ ಇರಲಿಲ್ಲ. ಅವರ ಹೆಂಡತಿ ಅನುಸೂಯ ಮನೆಯಲ್ಲಿದ್ದು, ಪಕ್ಕದ ಮನೆಯವರ ಸಹಾಯ ಪಡೆದು ರಾತ್ರೋರಾತ್ರಿ ಊರಿನಿಂದ ಪರಾರಿಯಾಗಿ ಪ್ರಾಣ ಕಾಪಾಡಿಕೊಂಡರು ಎನ್ನಲಾಗಿದೆ.

ಕೆಆರ್‍ಎಸ್ ಬಳಿಯೂ ಹಲ್ಲೆಗೆ ಸಂಚು: ಶುಕ್ರವಾರ ತಡರಾತ್ರಿ ನಡೆದ ದಾಳಿಯ ಬಗ್ಗೆ ಶ್ರೀನಿವಾಸಾಚಾರಿ ಕೆಆರ್‍ಎಸ್ ಪೊಲೀಸರಿಗೆ ನಮ್ಮ ವಿರುದ್ಧ ದೂರು ನೀಡಲು ಶನಿವಾರ ಬೆಳಗ್ಗೆ ಬಂದೇ ಬರುತ್ತಾನೆ ಎಂದು ಆತನ ಮೇಲೆ ಹಲ್ಲೆ ನಡೆಸಲು ಮೂವರು ಸನ್ನದ್ದರಾಗಿದ್ದನ್ನು ತಿಳಿದ ಅನುಸೂಯ ನೇರವಾಗಿ ಶ್ರೀರಂಗಪಟ್ಟಣ ಡಿವೈಎಸ್‍ಪಿ ಅವರಿಗೆ ದೂರು ನೀಡಿದರು.

ದಾಳಿಯಲ್ಲಿ ಬೆಲೆಬಾಳುವ ಮನೆಯ ಮುಂಬಾಗಿಲು, ಕಿಟಕಿಯ ಗಾಜುಗಳು ಮತ್ತು ಶೌಚಾಲಯದ ಬಾಗಿಲನ್ನೂ ದುಷ್ಕರ್ಮಿಗಳು ಒಡೆದು ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News