ಹಾಸನ: ಜಿಲ್ಲಾಧಿಕಾರಿ ಕಚೇರಿ ಎದುರು ಹೆಚ್‍ಸಿಎನ್ ಕೇಬಲ್ ವೆಲ್‍ಫೇರ್ ಯೂನಿಯನ್ ನಿಂದ ಧರಣಿ

Update: 2018-12-15 15:11 GMT

ಹಾಸನ,ಡಿ.15: ಟಿ.ವಿ ಕೇಬಲ್ ಸಂಬಂಧ ಕೇಂದ್ರ ಸರ್ಕಾರ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಮುಖಾಂತರ ನೂತನವಾಗಿ ಜಾರಿಗೆ ತಂದಿರುವ ನಿಯಮಗಳು ಗ್ರಾಹಕ ವಿರೋಧಿಯಾಗಿದೆ ಎಂದು ಆರೋಪಿಸಿ ಹೆಚ್‍ಸಿಎನ್ ಕೇಬಲ್ ವೆಲ್‍ಫೇರ್ ಯೂನಿಯನ್ ವತಿಯಿಂದ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಈವರೆಗೆ ಕೇಬಲ್ ಆಪರೇಟರ್ ಗಳು ಯಾವುದೇ ಶುಲ್ಕ ಪಾವತಿಸಿಕೊಳ್ಳದೇ ನೀಡುತ್ತಿದ್ದ ಕೆಲ ಚಾನಲ್‍ಗಳಿಗೂ ಕೂಡ ನೂತನ ನಿಯಮಾವಳಿ ಪ್ರಕಾರ ಶುಲ್ಕ ಪಾವತಿಸಬೇಕಿದ್ದು, ಗ್ರಾಹಕರಿಗೆ ಹೊರೆಯಾಗಲಿದೆ. ಅಲ್ಲದೇ ಸ್ಥಳೀಯ ಕೇಬಲ್ ಆಪರೇಟರ್ ಗಳಿಗೂ ತೀವ್ರ ತೊಂದರೆಯಾಗಲಿದೆ ಎಂದು ದೂರಿದರು. ಕೇಬಲ್ ಸಂಪರ್ಕಕ್ಕಾಗಿ ತೆರಿಗೆ ಸೇರಿದಂತೆ ಕನಿಷ್ಠ 154 ರೂ.ಗಳನ್ನು ಗ್ರಾಹಕರು ಪಾವತಿಸಬೇಕಿದ್ದು, ಗ್ರಾಹಕರ ಆಯ್ಕೆಯ ಚಾನೆಲ್‍ಗಳು ಒಳಗೊಂಡರೆ ಚಾಲ್ತಿ ದರಕ್ಕಿಂತ ದುಪ್ಪಟ್ಟು ಕೇಬಲ್ ಶುಲ್ಕವನ್ನು ಅನಿವಾರ್ಯವಾಗಿ ಗ್ರಾಹಕರು ಪಾತಿಸಬೇಕಾಗಿದೆ. ಇದರಿಂದ ಗ್ರಾಹಕರಿಗೆ ದೊಡ್ಡ ಹೊರೆಯಾಗಲಿದೆ ಎಂದು ಆರೋಪಿಸಿದರು.

ನೂತನ ನಿಯಮಾವಳಿ ಪ್ರಕಾರ ಸ್ಥಳೀಯ ಕೇಬಲ್ ಆಪರೇಟರ್ ಗಳು ಶೇ.10ರಷ್ಟು ಹಣ ಪಡೆದು ಪಾವತಿಸಿ ಬಳಸುವ ಚಾನಲ್‍ಗಳನ್ನು ನಿರ್ವಹಿಸಬೇಕಿದ್ದು, ನಿರ್ವಹಣೆ ತುಂಬಾ ಕಷ್ಟಕಾರಿಯಾಗಲಿದೆ. ಆ ನಿಟ್ಟಿನಲ್ಲಿ ಟ್ರಾಯ್‍ನ ಈ ನಿರ್ಧಾರ ತೀರಾ ಅವೈಜ್ಞಾನಿಕ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ಈ ನಿರ್ಧಾರದಿಂದ ಬಂಡವಾಳಶಾಹಿಗಳಿಗೆ ಲಾಭವಾಗಲಿದ್ದು, ಬಡ ಗ್ರಾಹಕರಿಗೆ ತೀವ್ರ ಆರ್ಥಿಕ ಹೊರೆ ಬಿಳಲಿದೆ. ಅಲ್ಲದೇ ಇದುವರೆಗೂ ಅನ್ಯ ಭಾಷೆಗಳು ಸೇರಿದಂತೆ, ಕ್ರೀಡೆ ಹಾಗೂ ಇತರೇ 250 ಚಾನೆಗಳನ್ನು ಕನಿಷ್ಟ ಪ್ಯಾಕೇಜ್‍ನಲ್ಲಿ ಗ್ರಾಹಕರಿಗೆ ನೀಡಲಾಗುತ್ತಿತ್ತು ಆದರೆ ನೂತನ ನಿಯಮಾವಳಿ ಗ್ರಾಹಕರಿಗೆ ತೀವ್ರ ದುಬಾರಿಯಾಗಲಿದೆ. ಹಾಗಾಗೀ ಕೂಡಲೇ ನಿಯಮಾವಳಿಯನ್ನು ಮತ್ತೊಮ್ಮೆ ಪರಾಮರ್ಶಿಸಿ ಈ ಹಿಂದಿನಂತೆ ಉದ್ಯಮ ನಡೆಯಲು ಅನುಕೂಲ ಮಾಡಿಕೊಡಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯ ನೇತೃತ್ವವನ್ನು ಹೆಚ್‍ಸಿಎನ್ ಕೇಬಲ್ ವೆಲ್‍ಫೇರ್ ಯೂನಿಯನ್ ಅಧ್ಯಕ್ಷ ಮಂಜೇಶ್, ಕಾರ್ಯದರ್ಶಿ ಎಂ.ಎಸ್ ಚಂದ್ರಶೇಖರ್, ಉಪಾಧ್ಯಕ್ಷ ಶ್ರೀನಿವಾಸ್, ಖಜಾಂಚಿ ಗಿರೀಶ್, ಸತೀಶ್ ಪಟೇಲ್, ಮಲ್ಲಿಕ್, ಚನ್ನಕೇಶವ ಸೇರಿದಂತೆ ಹಲವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News