ಹನೂರು ದೇವಸ್ಥಾನದಲ್ಲಿ ವಿಷ ಪ್ರಸಾದ ಪ್ರಕರಣ: ಮೃತರ ಸಾಮೂಹಿಕ ಅಂತ್ಯಕ್ರಿಯೆ

Update: 2018-12-15 15:29 GMT

ಹನೂರು,ಡಿ.15: ಸುಳ್ವಾಡಿ ಗ್ರಾಮದ ಕಿಚ್ಚುಗುತ್ತು ಮಾರಮ್ಮ ದೇವಸ್ಥಾನದಲ್ಲಿ ಪ್ರಸಾದ ತಿಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ  ಬಿದರಹಳ್ಳಿ ಗ್ರಾಮದ ಗೋಪಿಯಮ್ಮ, ಶಾಂತರಾಜ್ ಗಾಡಸ್ಟ್ ನಗರದ ಪ್ರೀತಮ್ ಹಾಗೂ ವಡ್ಡರದೂಡ್ಡಿ ಗ್ರಾಮದ ಶಕ್ತಿವೇಲ್‍ರ ಮೃತದೇಹಗಳನ್ನು  ಗ್ರಾಮದಲ್ಲಿ ಸ್ಮಶಾನ ಇಲ್ಲದ ಕಾರಣ ಬಿದರಹಳ್ಳಿ ಗ್ರಾಮದಲ್ಲಿ ಸಾಮೂಹಿಕ ಅಂತ್ಯಕ್ರಿಯೆ ಮಾಡಲಾಯಿತು.

ಈ ನಾಲ್ವರ ಅಂತ್ಯಕ್ರಿಯೆಗೆ ಸಚಿವ ಪುಟ್ಟರಾಜು, ಶಾಸಕ ಎನ್.ಮಹೇಶ್ ಸೇರಿದಂತೆ ಹಲವು ಗಣ್ಯರು ಮೃತರ ಕುಟಂಬಸ್ಥರಿಗೆ ಸಾಂತ್ವನ ಹೇಳಿ ಅಂತಿಮ ದರ್ಶನ ಪಡೆದರು.

ಸ್ಮಶಾನದ ವಾತಾವರಣ: ದೇವಸ್ಥಾನದ ಪ್ರಸಾದ ಸೇವಿಸಿ ತಾಲೂಕಿನ ಬಿದರಹಳ್ಳಿ ಗ್ರಾಮದ ಹಲವು ಜನ ಅಸ್ವಸ್ಥರಾಗಿದ್ದು, ನಾಲ್ವರು ಮೃತಪಟ್ಟ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ನೀರಸ ಮೌನ ಆವರಿಸಿದ್ದು, ಮೃತರ ಕುಟಂಬಸ್ಥರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಘಟನೆಯಲ್ಲಿ ಮೃತಪಟ್ಟಿದ್ದ ಅಣ್ಣಯಪ್ಪ ಹಾಗೂ ಹನೂರು ಸಮೀಪದ ತೋಮಿಯರ್ ಪಾಳ್ಯದ ರಾಚಯ್ಯ, ತುಳಸಿಕೆರೆ ಗ್ರಾಮದ ದೊಡ್ಡಮಾದ್ದಯ್ಯ, ಹಳೇಯೂರು ಗ್ರಾಮದ ಶಿವಕುಮಾರ್ ಶವವನ್ನು ಶನಿವಾರ ಗ್ರಾಮದ ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು. 

ಭೇಟಿ: ಘಟನೆ ಸ್ಥಳಕ್ಕೆ ರಾಜ್ಯ ಪುಡ್ ಸೇಪ್ಟಿ ಇಲಾಖೆ ಆಯುಕ್ತೆ ಭೇಟಿ ನೀಡಿ ಸ್ಥಳೀಯ ಗ್ರಾಮಸ್ಥರ ಜೊತೆ ಚರ್ಚಿಸಿ ಈ ಸಂಬಂಧ ಮಾಹಿತಿ ಸಂಗ್ರಹಣೆ ಮಾಡಿದರು. 

ಹುಟ್ಟುಹಬ್ಬದಂದೇ ಮೃತಪಟ್ಟ ಪ್ರೀತಮ್: ತಾಲೂಕಿನ ಬಿದರಹಳ್ಳಿ ಶಾಲೆಯ 1 ನೇ ತರಗತಿ ವಿದ್ಯಾರ್ಥಿ ಪ್ರೀತಮ್ ತನ್ನ ಕುಟಂಬದವರು ಓಂ ಶಕ್ತಿ ಮಾಲೆಧಾರಿಯಾಗಿದ್ದ ಕಾರಣ ಶುಕ್ರವಾರ ಸುಳ್ವಾಡಿಯ ಮಾರಮ್ಮನ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಪ್ರಸಾದ ಸೇವಿಸಿ ಮೃತಪಟ್ಟಿದ್ದಾನೆ. ಶುಕ್ರವಾರ ಆತನ ಹುಟ್ಟಿದ ದಿನವಾಗಿದ್ದು, ಜನಿಸಿದ ದಿನದಂದೇ ಮೃತಪಟ್ಟಿದ್ದಾನೆ.

ಅಲ್ಲದೆ ಇದೇ ಶಾಲೆಯ ವಿದ್ಯಾರ್ಥಿಗಳಾದ 2 ನೇ ತರಗತಿಯ ಜೀವ, ಸುಮಂಗಲಿ, ಪ್ರೀತಮ್, ಹಳೇ ಮಾರ್ಟಳ್ಳಿಯ ಸರ್ವೇಶ್ ಎಂಬವರು ಮೈಸೂರಿನ  ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News