ದೇವರ ಹೆಸರಿನಲ್ಲಿ ಭಕ್ತರನ್ನು ಬಲಿ ಪಡೆದ ಘಟನೆ ವಿಷಾದನೀಯ: ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ

Update: 2018-12-15 15:43 GMT

ಮೈಸೂರು,ಡಿ.15: ದೇವರ ಹೆಸರಿನಲ್ಲಿ ಅಮಾಯಕ ಭಕ್ತರನ್ನು ಬಲಿ ಪಡೆದ ದುರ್ಘಟನೆ ವಿಷಾದನೀಯ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಕಿಚುಗತ್ತಿ ಮಾರಮ್ಮ ದೇವಸ್ಥಾನದಲ್ಲಿ ವಿಷಾಹಾರ ಸೇವನೆಯಿಂದ ಅಸ್ವಸ್ಥಗೊಂಡು ನಗರ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಶನಿವಾರ ಭೇಟಿ ಮಾಡಿ ಸಾಂತ್ವನ ಹೇಳಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಇದೊಂದು ಅಮಾನವೀಯ ಕೃತ್ಯ. ಈ ಕೃತ್ಯದಲ್ಲಿ ಭಾಗಿಯಾಗಿರುವವರಿಗೆ ತಕ್ಕ ಶಿಕ್ಷೆಯಾಗಬೇಕು. ಇಲ್ಲಿನ ಅಸ್ವಸ್ಥರೊಂದಿಗೆ ನಾನು ಮಾತನಾಡಿ ಘಟನೆ ಕುರಿತು ಮಾಹಿತಿ ಪಡೆದೆ. ಅವರ ಪ್ರಕಾರ ಪ್ರಸಾದ ಸೇವಿಸಿದ ಸಮಯದಲ್ಲಿ ಸೀಮೆ ಎಣ್ಣೆ ವಾಸನೆ ಬರುತಿತ್ತು ಮತ್ತು ಕೆಮಿಕಲ್ ಮಿಶ್ರಣದ ವಾಸನೆ ಬರುತಿತ್ತು. ಆದರೆ ದೇವರ ಪ್ರಸಾದ ಬಿಡಬಾರದು ಎಂದು ತಿಂದೆವು ಎಂದು ಹೇಳಿದರು. ನಂಬಿಕೆಯೋ ಅಪನಂಬಿಕೆಯೋ ಇಂತಹ ಹೇಯ ಕೃತ್ಯ ನಡೆಯಬಾರದಿತ್ತು. ತಪ್ಪಿತಸ್ಥರನ್ನು ಕೂಡಲೇ ಪತ್ತೆ ಹಚ್ಚಿ ಕಠಿಣ ಶಿಕ್ಷಗೊಳಪಡಿಸಬೇಕು ಎಂದು ಹೇಳಿದರು. 

ನನ್ನ ಅವಧಿಯಲ್ಲಿ ಆಸ್ಪತ್ರೆಗಳ ಮೇಲ್ದರ್ಜೆಗೆ: ನಾನು 1994-95ರಲ್ಲಿ ಆರೋಗ್ಯ ಸಚಿವನಾಗಿದ್ದ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿದ್ದೆ. ಹಾಗಾಗಿ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲೂ ಉತ್ತಮ ಚಿಕಿತ್ಸೆ ದೊರೆಯುತ್ತಿದೆ. ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಆಸ್ಪತ್ರೆಗಳಿಗೆ ಒದಗಿಸಬೇಕಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News