ಪ್ರಸಾದ ಸೇವಿಸಿ ಸಾವು ಪ್ರಕರಣ: ಶವಾಗಾರಕ್ಕೆ ಭೇಟಿ ನೀಡಿದ ಜನಪ್ರತಿನಿಧಿಗಳು

Update: 2018-12-15 17:27 GMT

ಕೊಳ್ಳೇಗಾಲ,ಡಿ.15: ಪ್ರಸಾದ ಸೇವನೆಯಿಂದ ಸಾವಿಗೀಡಾದವರ ಮೃತದೇಹಗಳನ್ನು ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ, ಸಂಸದ ಆರ್. ದ್ರುವನಾರಾಯಣ್ ಹಾಗೂ ಹನೂರು ಶಾಸಕ ಆರ್.ನರೇಂದ್ರ ಭೇಟಿ ನೀಡಿ, ಪರಿಶೀಲಿಸಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಿದ್ದ ಮೂವರ ಮೃತದೇಹವನ್ನು ನೋಡಿ ನಂತರ ನೆರೆದಿದ್ದ ಮೃತರ ಸಂಬಂಧಿಕರನ್ನು ಸಮಾಧಾನ ಪಡಿಸಿದ ಸಚಿವರು ವೈಯಕ್ತಿಕವಾಗಿ ಸಹಾಯಧನ ನೀಡಿದರು. ನಂತರ ಹಿಂದುಳಿದ ವರ್ಗಗಳ ಸಚಿವ ಪುಟ್ಟರಂಗಶೆಟ್ಟಿ ಮಾತನಾಡಿ, ಸುಳ್ವಾಡಿ ಗ್ರಾಮದ ದೇವಾಲಯದಲ್ಲಿ ಪ್ರಸಾದ ಸೇವಿಸಿ ಸುಮಾರು 93 ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುಮಾರು 11 ಮಂದಿ ಮೃತಪಟ್ಟಿದ್ದಾರೆ. ಇನ್ನೂ ಕೆಲವರು ಗಂಭೀರ ಸ್ಥಿತಿಯಲ್ಲಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ಎಲ್ಲರನ್ನೂ ಕ್ಷೇಮಗೊಳಿಸಲು ಸರ್ಕಾರ ಸಾಕಷ್ಟು ಕ್ರಮ ವಹಿಸಿದೆ. ಇಂತಹ ಕೃತ್ಯ ಎಸಗಿದವರನ್ನು ಅದಷ್ಟು ಬೇಗ ಬಂಧಿಸಿ ಕಾನೂನು ಕ್ರಮ ಜರುಗಿಸುವಂತೆ ತಿಳಿಸಲಾಗಿದೆ ಎಂದರು. 

ರಾತ್ರಿ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಇನ್ನೂ ಅನುಮಾನ ಉಳ್ಳವರನ್ನು ಬಂಧಿಸಿ ವಿಚಾರಣೆ ನಡೆಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿರುವುದಾಗಿ ಹೇಳಿದರು.

ಹನೂರು ಶಾಸಕ ನರೇಂದ್ರ ಮಾತನಾಡಿ, ಈ ದುರ್ಘಟನೆ ಬಹಳ ದುಃಖ ತರುವಂತಹ ವಿಷಯ. ಸದನದಲ್ಲಿದ್ದ ವಿಷಯ ತಿಳಿದ ಕೂಡಲೇ ಹೊರಟು ಇಂದು ಬೆಳಗ್ಗೆ ಕ್ಷೇತ್ರಕ್ಕೆ ಆಗಮಿಸಿದ್ದೇನೆ. ನಿನ್ನೆಯಿಂದ ಪ್ರತಿಯೊಂದರ ಬಗ್ಗೆ ಮಾಹಿತಿ ಪಡೆದುಕೊಂಡು ಬಂದಿದ್ದೇನೆ. ಇದುವರೆಗೂ ಯಾವತ್ತು ದೇವಾಲಯದಲ್ಲಿ ಪ್ರಸಾದ ನೀಡಿದ್ದಿಲ್ಲ. ಗೋಪುರ ಶಂಕುಸ್ಥಾಪನೆ ಕಾರ್ಯಕ್ರಮದ ಅಂಗವಾಗಿ ನಿನ್ನೆ ರೈಸ್‍ಬಾತ್‍ನ್ನು ನೀಡಿದ್ದಾರೆ. ದೇವಾಲಯದಲ್ಲಿ ಕೊಟ್ಟಂತಹ ಪ್ರಸಾದವನ್ನು ಸೇವಿಸಿದ ಭಕ್ತರು ಇಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನೂ ಕೆಲವರು ಅಸುನೀಗಿದ್ದಾರೆ ಎಂದರು. 

ವೈದ್ಯರ ಜೊತೆ ಮಾತನಾಡಿದ ಬಳಿಕ ಗೃಹ ಸಚಿವರ ಜೊತೆ ಮಾತನಾಡಿ ಇಲ್ಲಿನ ಪ್ರಕರಣದ ಬಗ್ಗೆ ಕೂಲಂಕಶವಾಗಿ ತನಿಖೆ ನಡೆಸಬೇಕು. ಯಾರೇ ಈ ಕೃತ್ಯದಲ್ಲಿ ಭಾಗಿಯಾಗಿದ್ದರೂ ಸಹ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಲಾಗಿದೆ. ಗೃಹ ಸಚಿವರು ಕೂಡ ತನಿಖೆ ನಡೆಸಲು ಸೂಚಿಸಿವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು. 

ಸಂಸದ ಆರ್. ದ್ರುವನಾರಾಯನ್ ಮಾತನಾಡಿ, ನಮ್ಮ ಭಾಗದಲ್ಲಿ ಯಾವುತ್ತೂ ಕೂಡ ಇಂತಹ ರ್ದುಘಟನೆ ನಡೆದಿಲ್ಲ. ನಿನ್ನೆ ನಡೆದಿರುವುದು ಬಹಳ ದುರದೃಷ್ಟಕರ ಘಟನೆ ಎಂದು ಹೇಳಿದರು. ರೋಗಗಳು ದಾಖಲಾದ ಆಸ್ಪತ್ರೆಗಳಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳನ್ನು ನೇಮಿಸಿ ಅವರ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ, ಜಿ.ಪಂ ಅಧ್ಯಕ್ಷೆ ಶಿವಮ್ಮ, ಸದಸ್ಯೆ ಲೇಖಾರವಿಂದ್ರ, ಮಾಜಿ ಸದಸ್ಯ ಕೊಪ್ಪಾಳಿ ಮಹದೇವನಾಯಕ, ದೇವರಾಜು, ನಗರಸಬೆ ಮಾಜಿ ಸದಸ್ಯ ಮುಡಿಗುಂಡ ಶಾಂತರಾಜು, ಮಧುವನಹಳ್ಳಿ ಶಿವಕುಮಾರ್, ಪುಟ್ಟರಾಜು, ನಾಗರಾಜು ಇನ್ನಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News