ಹಾಕಿ ಕಲಿಯುವುದೇನಿದೆ ಬಾಕಿ?

Update: 2018-12-15 18:38 GMT

ಅಂತರ್‌ರಾಷ್ಟ್ರೀಯ ಹಾಕಿ ಫೆಡರೇಷನ್‌ನಲ್ಲಿ ಪ್ರಮುಖ ಹುದ್ದೆ ಹೊಂದುವುದೇ ನಮ್ಮ ದೇಶದ ಹಾಕಿಯಲ್ಲಿ ದೊಡ್ಡ ಸಾಧನೆ ಎನ್ನುತ್ತೇವೆ. ಜಾಗತಿಕ ಮಟ್ಟದಲ್ಲಿ ಯಾವುದೇ ಅಧಿಕಾರ ಇಲ್ಲದಿರುವಾಗ ಭಾರತ ಎಂಟು ಒಲಿಂಪಿಕ್ಸ್ ಪದಕಗಳನ್ನು ಗೆದ್ದಿತ್ತು. ನಮಗೆ ಅಧಿಕಾರ ಬೇಕು ಆದರೆ ಯಶಸ್ಸು ಬೇಕಾಗಿಲ್ಲ.

ಭುವನೇಶ್ವರದಲ್ಲಿ ನಡೆಯುತ್ತಿರುವ ವಿಶ್ವಕಪ್ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡ ಕ್ವಾರ್ಟರ್ ಫೈನಲ್‌ಗೇ ತೃಪ್ತಿಪಟ್ಟಿತು. ಗೆಲ್ಲಲು ಅವಕಾಶವಿರುವ ಪಂದ್ಯದಲ್ಲಿ ಸೋಲಿನ ಆಘಾತ ಅನುಭವಿಸಿತು. ಅಂದರೆ ಆರನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ನೆದರ್ಲ್ಯಾಂಡ್ಸ್ ವಿರುದ್ಧ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋತಿರುವುದಕ್ಕೆ ಅಂಪೈರ್‌ಗಳ ತಪ್ಪು ತೀರ್ಪೇ ಕಾರಣ ಎಂದು ಕೋಚ್ ಹರೇಂದ್ರ ಸಿಂಗ್ ಗೊಣಗಿದ್ದಾರೆ.

ಭಾರತ ತಂಡ ರೋಚಕವಾದ ಪಂದ್ಯವೊಂದರಲ್ಲಿ ಸೋತಾಗಿ ಸಾಮಾನ್ಯವಾಗಿ ಇಂಥ ಮಾತುಗಳು ಕೇಳಿ ಬರುತ್ತವೆ. ಎದುರಾಳಿ ತಂಡದ ಹೋರಾಟ, ನಮ್ಮವರ ಕಾದಾಟ ಇವುಗಳನ್ನು ಮರೆತು ಇಲ್ಲದುದರ ಬಗ್ಗೆ ಗಮನ ಹರಿಸುತ್ತೇವೆ. ಭಾರತ ತಂಡ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಗೋಲು ಗಳಿಸಲು ಸಾಕಷ್ಟು ಅವಕಾಶಗಳಿದ್ದಿತ್ತು, ಆದರೆ ಸಿಕ್ಕ ಪಾಸನ್ನು ಗೋಲಾಗಿ ಪರಿವರ್ತಿಸುವಲ್ಲಿ ತಂಡದ ಯುವ ಆಟಗಾರರು ವಿಫಲರಾಗಿದ್ದಾರೆ. ತಂಡದ ಆಯ್ಕೆ ಮಾಡುವಾಗ ಎಸ್. ವಿ. ಸುನಿಲ್ ಹಾಗೂ ರೂಪಿಂದರ್ ಪಾಲ್ ಸಿಂಗ್ ಅವರಂಥ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿದ್ದು ತಂಡದ ಶಕ್ತಿಯಲ್ಲಿ ಸಮತೋಲನ ಇಲ್ಲದಂತಾಗಿತ್ತು. ಭಾರತ ತಂಡ 43 ವರ್ಷಗಳಿಂದ ವಿಶ್ವಕಪ್ ಹಾಕಿಯಲ್ಲಿ ಯಶಸ್ಸು ಕಾಣುತ್ತಿಲ್ಲ. ಮಾತೆತ್ತಿದರೆ ನಾವು ಒಲಿಂಪಿಕ್ಸ್‌ನಲ್ಲಿ ಎಂಟು ಚಿನ್ನದ ಪದಕ ಗೆದ್ದವರು ಎಂದು ಹೇಳುತ್ತೇವೆ. ಆದರೆ ಅಂದಿನ ಆಟದ ಶೈಲಿ ಹಾಗೂ ಇಂದಿನ ಆಟದ ಶೈಲಿಗೂ ಭಿನ್ನತೆ ಇದೆ. ಈಗ ಆಡುತ್ತಿರುವುದು ಕೃತಕ ಟರ್ಫ್ ನಲ್ಲಿ. ಈಗಿನ ಆಕ್ರಮಣಕಾರಿ ಆಟಕ್ಕೂ ಹಿಂದಿನ ಸಂಯೋಜಿತ ತಾಳ್ಮೆಯ ಆಟಕ್ಕೂ ಭಿನ್ನತೆ ಇದೆ. ತಂಡಕ್ಕೆ ವಿದೇಶಿ ತರಬೇತುದಾರರು ಬಂದಾಗ ನಮ್ಮ ಆಟಗಾರರು ಯಾವ ರಾಜ್ಯದವರು ಎಂಬುದನ್ನು ಗಮನಿಸದೆ, ಅವರ ನಿಜವಾದ ಆಟಕ್ಕೆ ಮನ್ನಣೆ ನೀಡಲಾಗುತ್ತದೆ. ಇದರಿಂದಾಗಿ ವಿದೇಶಿ ತರಬೇತುದಾರರು ಇದ್ದಾಗ ಕರ್ನಾಟಕದ ಅನೇಕ ಆಟಗಾರರು ತಂಡದಲ್ಲಿ ಸ್ಥಾನ ಪಡೆಯುತ್ತಿದ್ದರು. ಅದೇ ರೀತಿ ಉತ್ತಮ ಪ್ರದರ್ಶನವನ್ನು ನೀಡಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದರು. ಆದರೆ ಹರೇಂದರ್ ಸಿಂಗ್ ಕೋಚ್ ಆದಾಗಿನಿಂದ ದಕ್ಷಿಣದ ಆಟಗಾರರಿಗೆ ಸಿಗುವ ಅವಕಾಶ ಕಡಿಮೆಯಾಗುತ್ತಿದೆ. ಗಾಯದ ನೆಪವೊಡ್ಡಿ ಶ್ರೇಷ್ಠ ಆಟಗಾರ ಎಸ್.ವಿ. ಸುನಿಲ್ ಅವರನ್ನು ವಿಶ್ವಕಪ್‌ನಿಂದ ಹೊರಗಿಡಲಾಯಿತು. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಅಪಾರ ಅನುಭವ ಹೊಂದಿರುವ ಸುನಿಲ್ ಅವರನ್ನು ಜಗತ್ತಿನ ಆಟಗಾರರು ಹಾಕಿ ಅಂಗಣದ ಹುಸೇನ್ ಬೋಲ್ಟ್ ಎಂದು ಕರೆಯುತ್ತಾರೆ. ಕಾರಣ ಅವರ ವೇಗ. ಫಾರ್ವರ್ಡ್ ವಿಭಾಗದಲ್ಲಿ ಗೋಲು ಗಳಿಸಲು ನೆರವಾಗುವಂತೆ ಆಡುವ ಈ ಆಟಗಾರ ಈ ಬಾರಿಯ ವಿಶ್ವಕಪ್ ಆಡಿರುತ್ತಿದ್ದರೆ ಭಾರತ ಸಿಕ್ಕ ಅವಕಾಶದಿಂದ ವಂಚಿತವಾಗುತ್ತಿರಲಿಲ್ಲ.


 ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಭಾರತ ಉತ್ತಮವಾಗಿಯೇ ಆಡಿತ್ತು. ಆರಂಭದಲ್ಲೇ ಗೋಲು ಗಳಿಸಿ ಮೇಲುಗೈ ಸಾಧಿಸಿತ್ತು. ಆದರೆ ಕೊನೆಯ ಕ್ಷಣದಲ್ಲಿ ನೀಡಿದ ಪೆನಾಲ್ಟಿ ಅವಕಾಶ ಪ್ರವಾಸಿ ತಂಡವನ್ನು ಸೆಮಿಫೈನಲ್‌ಗೆ ಕೊಂಡೊಯ್ದಿತು. 43 ವರ್ಷಗಳಿಂದ ಭಾರತ ತಂಡ ವಿಶ್ವ ಕಪ್ ಹಾಕಿಯಲ್ಲಿ ಪದಕ ಗೆಲ್ಲುವಲ್ಲಿ ವಿಫಲವಾಗಿದೆ. ಪ್ರತಿ ಬಾರಿಯೂ ಅದಕ್ಕೊಂದು ಕಾರಣ ಹುಡುಕುತ್ತಲೇ ಇದೆ. ಕೋಚ್ ಹರೇಂದ್ರ ಸಿಂಗ್ ಅವರ ಪ್ರಕಾರ ‘‘ನಾವು 11 ಮಂದಿ ಆಟಗಾರರು ಅವರು ಮಾತ್ರ 13 ಮಂದಿ ಆಡಿದರು’’-ಎಂದು ಹೇಳಿರುವುದು ನಾವು ಯಾವುದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದೇವೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ನಾವು ಹಾಕಿಯ ಆಟದಲ್ಲಿನ ಸುಧಾರಣೆ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿಲ್ಲ. ಪ್ರಭಾವ ಮೊದಲು, ನಂತರ ತರಬೇತಿ. ಇದು ಭಾರತದ ಹೆಚ್ಚಿನ ಕ್ರೀಡಾ ಸಂಸ್ಥೆಗಳ ಆದ್ಯತೆ.
 ಭಾರತ ತಂಡ ನೆದರ್ಲ್ಯಾಂಡ್ಸ್ ವಿರುದ್ಧ ನಡೆದ ಹಿಂದಿನ ಆರು ವಿಶ್ವಕಪ್ ಪಂದ್ಯಗಳಲ್ಲಿ ಐದರಲ್ಲಿ ಜಯ ಗಳಿಸಿದೆ. ನಮಗೆ ತಾಯ್ನ್‌ಡಿನ ಪ್ರೇಕ್ಷಕರಿಲ್ಲದೆ ಆಡಲು ಬರುವುದೇ ಇಲ್ಲ. ಅದಕ್ಕೆ ಹರೇಂದ್ರ ಸಿಂಗ್ ಪ್ರೇಕ್ಷಕರನ್ನು ತಂಡದ 12ನೇ ಆಟಗಾರರೆಂದಿದ್ದಾರೆ. ತಂಡವೊಂದನ್ನು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರೋತ್ಸಾಹಿಸುತ್ತಿದ್ದರೆ ಆ ತಂಡ ಯಶಸ್ಸು ಕಾಣುವುದು ಸಹಜ. ಆದರೆ ಬರೀ ಪ್ರೇಕ್ಷಕರೇ ತಂಡದ ಶಕ್ತಿ ಆಗಬಾರದು. ವಿದೇಶಿ ತರಬೇತುದಾರರನ್ನು ಟೀಕಿಸುತ್ತಲೇ ದಿನ ಕಳೆಯುತ್ತಿರುವ ಭಾರತ ತಂಡದ ಮಾಜಿ ಆಟಗಾರರು ಆಟದಲ್ಲಿ ಹೊಸ ಸಾಧ್ಯತೆಗಳ ಬಗ್ಗೆ ಮಾತನಾಡುವುದಿಲ್ಲ. ಇದು ಭಾರತದ ಹಾಕಿಯಲ್ಲಿ ಕಂಡುಬರುವ ದೌಡ್ಡ ದೌರ್ಬಲ್ಯ.
  ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 5-0 ಅಂತರದಲ್ಲಿ ಜಯ ಗಳಿಸಿದ ನಂತರ ಬೆಲ್ಜಿಯಂ ವಿರುದ್ಧ 2-2 ಗೋಲಿನಿಂದ ಡ್ರಾ ಸಾಧಿಸಿತ್ತು, ನಂತರ ಕೆನಡಾ ವಿರುದ್ಧ 5-0 ಅಂತರದಲ್ಲಿ ಗೆದ್ದು ನೆದರ್ಲ್ಯಾಂಡ್ಸ್ ವಿರುದ್ಧ 1-2 ಗೋಲಿನಿಂದ ಸೋತಿತ್ತು. ಮನೆಯಂಗಣದಲ್ಲಿ ವಿಶ್ವಕಪ್ ನಡೆಸಿದ ಕಾರಣಕ್ಕೆ ನಾವೇ ಗೆಲ್ಲಬೇಕೆಂದಿಲ್ಲ. ಹಣ ಹಾಗೂ ಅಧಿಕಾರ ಇವುಗಳ ಮೂಲಕ ನಾವು ಆತಿಥ್ಯ ವಹಿಸಬಹುದು ಅಥವಾ ಆತಿಥ್ಯ ವಹಿಸಿದ ಕಾರಣಕ್ಕೆ ಆಡುವ ಅವಕಾಶವೂ ಸಿಗುತ್ತದೆ. ನಾವು ಹೇಗೆ ಇದ್ದೇವೆ, ವಿಶ್ವದ ಇತರ ತಂಡಗಳ ಸಾಮರ್ಥ್ಯ ಹೇಗಿದೆ?, ನಮ್ಮ ತಂಡ ಫಿಟ್ ಇದೆಯಾ? ಇವುಗಳೆಲ್ಲ ಮುಖ್ಯವಲ್ಲ. ಬದಲಾಗಿ ನಾವು ಗೆಲ್ಲಬೇಕು ಅಷ್ಟೆ. ಭಾರತ ಮಹಿಳಾ ಹಾಕಿ ತಂಡಕ್ಕೆ ಡಚ್ ಕೋಚ್ ಸಜೊರ್ಡ್ ಮರಿಜ್ನೆ ಅವರು ತರಬೇತಿ ನೀಡುತ್ತಿದ್ದರು. ಆದರೆ ಆಟಗಾರರೆಲ್ಲ ಸೇರಿಕೊಂಡು ಅವರನ್ನು ಓಡಿಸುವ ಯತ್ನ ಮಾಡಿದರು. 1980ರಿಂದ ಭಾರತ ತಂಡಕ್ಕೆ 51 ಕೋಚುಗಳು ತರಬೇತಿ ನೀಡಿದ್ದಾರೆ. ನಾವು ಸಂಘಟಿತರಾಗಿ ವಿದೇಶಿ ಕೋಚ್‌ಗಳನ್ನು ಓಡಿಸುತ್ತಲೇ ಬಂದಿದ್ದೇವೆ. ಆಟಗಾರರನ್ನೇ ಎತ್ತಿಕಟ್ಟಿ ವಿದೇಶಿ ಆಟಗಾರರನ್ನು ಓಡಿಸುವುದು ನಮ್ಮ ನಿತ್ಯದ ಕೆಲಸವಾಗಿತ್ತು. ಹಾಗಾಗಿ ನಮ್ಮ ತಂಡ ಸಂಘಟಿತ ತಂಡವಾಗಿ ರೂಪುಗೊಂಡಿಲ್ಲ. ಉತ್ತಮ ಆಟಗಾರರಿದ್ದರೂ ಅವರ ಸಂಘಟಿತ ಹೋರಾಟ ವಿರಳವಾಗುತ್ತ ಬಂತು. ವಿಶ್ವದಲ್ಲಿ ಐದನೇ ರಾಂಕ್ ತಲುಪಿದರೂ ಅದು ನಿರಂತರ ಪಂದ್ಯಗಳಿಂದಲೇ ಹೊರತು ಪ್ರಮುಖ ಜಾಗತಿಕ ಮಟ್ಟದ ಟೂರ್ನಿಗಳಲ್ಲಿ ಗೆದ್ದುದರ ಪರಿಣಾಮವಲ್ಲ. ಪ್ರಥಮ ಸ್ಥಾನದಲ್ಲಿರುವ ತಂಡವೊಂದು ನಿರಂತರ ಪಂದ್ಯಗಳನ್ನಾಡದಿದ್ದರೂ ಅದು ತನ್ನ ಅಗ್ರ ಸ್ಥಾನವನ್ನು ಕಳೆದುಕೊಳ್ಳುತ್ತದೆ. ಕೆಳ ಕ್ರಮಾಂಕದಲ್ಲಿರುವ ತಂಡ ಪಂದ್ಯಗಳನ್ನು ಗೆಲ್ಲದಿದ್ದರೂ ನಿರಂತರ ಪಂದ್ಯಗಳನ್ನಾಡಿ ರಾಂಕಿಂಗ್‌ನಲ್ಲಿ ಮೇಲಕ್ಕೇರುತ್ತದೆ.
ನಮ್ಮ ದೇಶೀಯ ಕೋಚ್‌ಗಳು ದೇಶಕ್ಕಾಗಿ ಜೀವ ಕೊಡಲು ಸಜ್ಜಾಗಿ, ಆಕ್ರಮಣಕಾರಿ ಆಟವಾಡಿ ಎಂದು ಹುರಿದುಂಬಿಸುತ್ತಿದ್ದರೇ ವಿನಃ ಆಟದಲ್ಲಿ ಹೊಸ ತಂತ್ರವನ್ನು ಕಲಿಸುತ್ತಿರಲಿಲ್ಲ. ಆಟದಲ್ಲಿ ಉತ್ಕಟವಾದ ದೇಶ ಭಕ್ತಿ ತುಂಬಿರುತ್ತದೆ ಹೊರತು, ಎದುರಾಳಿಯಂತೆ ರಣತಂತ್ರ ರೂಪಿಸಿ ಆಡುವ ಯೋಚನೆ ಕಡಿಮೆಯಾಗಿದೆ. ಹಾಗಾಗಿ ಸೋತಾಗ ಹಾಗೂ ಗೆದ್ದಾಗ ನಾವು ಹೆಚ್ಚು ಭಾವುಕರಾಗುತ್ತೇವೆ. ನಾವು ಆಗಾಗ ಕೋಚ್‌ಗಳನ್ನು ಬದಲಾವಣೆ ಮಾಡುತ್ತಾ ಬಂದೆವು, ಆದರೆ ಹಾಕಿ ಇಂಡಿಯಾದಲ್ಲಿ ಒಬ್ಬ ಉತ್ತಮ ಆಟಗಾರನಿಗೆ ಆಡಳಿತದ ಚುಕ್ಕಾಣಿ ನೀಡುವ ಕೆಲಸವನ್ನು ಮಾಡಿಲ್ಲ. ಅಂತರ್‌ರಾಷ್ಟ್ರೀಯ ಹಾಕಿ ಫೆಡರೇಷನ್‌ನಲ್ಲಿ ಪ್ರಮುಖ ಹುದ್ದೆ ಹೊಂದುವುದೇ ನಮ್ಮ ದೇಶದ ಹಾಕಿಯಲ್ಲಿ ದೊಡ್ಡ ಸಾಧನೆ ಎನ್ನುತ್ತೇವೆ. ಜಾಗತಿಕ ಮಟ್ಟದಲ್ಲಿ ಯಾವುದೇ ಅಧಿಕಾರ ಇಲ್ಲದಿರುವಾಗ ಭಾರತ ಎಂಟು ಒಲಿಂಪಿಕ್ಸ್ ಪದಕಗಳನ್ನು ಗೆದ್ದಿತ್ತು. ನಮಗೆ ಅಧಿಕಾರ ಬೇಕು ಆದರೆ ಯಶಸ್ಸು ಬೇಕಾಗಿಲ್ಲ. ಜಾಗತಿಕ ಮಟ್ಟದ ಪಂದ್ಯಗಳು ಬಂದಾಗ ನಮ್ಮ ಆಟಗಾರರು ನೈಜ ಸಾಮರ್ಥ್ಯ ತೋರುವಲ್ಲಿ ವಿಫಲವಾಗುತ್ತಾರೆ. ಅಥವಾ ಎದುರಾಳಿ ತಂಡದ ನೈಜ ಸಾಮರ್ಥ್ಯದ ಮುಂದೆ ನಮ್ಮವರ ಆಟ ಮಂಕಾಗುತ್ತದೆ. ನಿರಂತರ ಆಟಗಾರರ ಬದಲಾವಣೆ, ಕೋಚ್‌ಗಳ ಬದಲಾವಣೆ ಇವುಗಳನ್ನು ಮುಂದುವರಿಸುತ್ತಲೇ ಇದ್ದರೆ ಭಾರತ ಹೀಗೆಯೇ ಹಿಂದಿನ ಕತೆಯನ್ನೇ ಮೆಲುಕು ಹಾಕಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News