ಚಿಕ್ಕಮಗಳೂರು: ಇಂದಿರಾ ಕ್ಯಾಂಟೀನ್ ಉದ್ಘಾಟನೆ ವೇಳೆ ಪೊಲೀಸರಿಂದ ಅನುಚಿತ ವರ್ತನೆ; ಆರೋಪ

Update: 2018-12-16 13:52 GMT

ಚಿಕ್ಕಮಗಳೂರು, ಡಿ.16: ಸಚವ ಸ್ಥಾನದ ಶ್ರೇಯಾಂಕ ಹೊಂದಿದ್ದರೂ ದಲಿತ ಮಹಿಳೆ ಎಂಬ ಕಾರಣಕ್ಕೆ ಇತ್ತೀಚೆಗೆ ನಗರದಲ್ಲಿ ಹಮ್ಮಿಕೊಳ್ಳಲಾದ ಇಂದಿರಾ ಕ್ಯಾಂಟಿನ್ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡದೆ ಅವಮಾನ ಮಾಡಲಾಗಿದೆ. ಇದನ್ನು ಪ್ರಶ್ನಿಸಲು ಹೋದ ವೇಳೆ ಪೊಲೀಸರು ತನ್ನೊಂದಿಗೆ ಅನುಚಿತವಾಗಿ ವರ್ತಿಸಿ ಬಂದಿಸಿ ಅವಮಾನಿಸಿದ್ದಾರೆ. ಆದ್ದರಿಂದ ತಪ್ಪಿತಸ್ಥ ಪೊಲೀಸರನ್ನು ಈ ಕೂಡಲೇ ಅಮಾನತು ಮಾಡಬೇಕೆಂದು ಒತ್ತಾಯಿಸಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.

ನಗರದಲ್ಲಿ ಸರಕಾರಿ ಪ್ರಾಯೋಜಿತ ಇಂದಿರಾ ಕ್ಯಾಂಟೀನ್ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನಡೆದಿದ್ದು, ಶಿಷ್ಟಾಚಾರದಂತೆ ಜಿಲ್ಲಾ ಪಂಚಾಯತ್‍ನ ಮಹಿಳಾ ಅಧ್ಯಕ್ಷೆಯಾದ ತನಗೆ ಆಹ್ವಾನ ನೀಡಬೇಕಿತ್ತು. ಆದರೆ ಕಾಂಗ್ರೆಸ್ ಮುಖಂಡರ ಹುನ್ನಾರದಿಂದಾಗಿ ನಗರಸಭೆ ಅಧಿಕಾರಿಗಳು ತನಗೆ ಆಹ್ವಾನ ನೀಡದೇ ಅವಮಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಾನು ಜಿಲ್ಲಾಪಂಚಾಯತ್ ಸದಸ್ಯರು ಹಾಗೂ ತಾಪಂ ಅಧ್ಯಕ್ಷ, ಸದಸ್ಯರೊಂದಿಗೆ ಅಂದು ಇಂದಿರಾ ಕ್ಯಾಂಟೀನ್ ಉದ್ಘಾಟನಾ ಸ್ಥಳಕ್ಕೆ ಈ ಬಗ್ಗೆ ಸ್ಪಷ್ಟನೆ ಕೇಳಲು ತೆರಳಿದ್ದೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಅಲ್ಲದೇ ದಲಿತ ಮಹಿಳೆ ಹಾಗೂ ಸಚಿವ ಸ್ಥಾನದ ಶ್ರೇಯಾಂಕ ಹೊಂದಿರುವ ಜನಪ್ರತಿನಿಧಿ ಎಂಬುದನ್ನೂ ಮರೆತು ಕೈ ಹಿಡಿದು ಎಳೆದಾಡಿದ್ದಾರೆ. ಸಾಲದೆಂಬಂತೆ ತನ್ನನ್ನು ದನಗಳನ್ನು ವಾಹನಕ್ಕೆ ತುಂಬುವಂತೆ ಪೊಲೀಸ್ ವಾಹನಕ್ಕೆ ತುಂಬಿಕೊಂಡು ಬಂಧಿಸಿ ಅವಮಾನಿಸಿದ್ದಾರೆಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್‍ರವರ ಬಳಿ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸದ ಕುರಿತು ವಿಚಾರಿಸಲು ಹೋಗಿದ್ದನ್ನೇ ನೆಪ ಮಾಡಿಕೊಂಡ ಪೊಲೀಸರು ವಿನಾಕಾರಣ ಬಂಧಿಸಿ ವಿವಾದ ಸೃಷ್ಟಿಸಿದ್ದಾರೆ. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಧಿಕ್ಕಾರದ ಘೋಷಣೆ ಕೂಗಿ ಸಣ್ಣ ವಿಷಯವನ್ನು ವಿವಾದ ಮಾಡಿದ್ದರೂ ಅವರ ಮೇಲೆ ಪೊಲೀಸರು ಯಾವುದೇ ಕ್ರಮ ವಹಿಸದೇ ತಾರತಮ್ಯ ನೀತಿ ಅನುಸರಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲಾ ಪಂಚಾಯತ್‍ನ ಮಹಿಳಾ ಅಧ್ಯಕ್ಷರೆನ್ನದೇ ಚುನಾಯಿತ ಪ್ರತಿನಿಧಿಯಾದ ತನ್ನನ್ನೂ ಸೇರಿದಂತೆ ಜಿಪಂ, ತಾಪಂ ಜನಪ್ರತಿನಿಧಿಗಳೊಂದಿಗೆ ಪೊಲೀಸರು ಉಡಾಫೆಯಾಗಿ ವರ್ತಿಸುವ ಮೂಲಕ ತಮ್ಮ ಕಾನೂನು ಪರಿದಿಯನ್ನು ಉಲ್ಲಂಘಿಸಿ, ಬಸವನಹಳ್ಳಿ ಪೊಲೀಸ್ ಠಾಣೆಗೆ ಕರೆದು ಕೊಂಡು ಹೋಗಿ ನನ್ನನ್ನು ಅಗೌರವದಿಂದ ಕಂಡಿದ್ದಾರೆ. ತನ್ನೊಂದಿಗೆ ಅಗೌರವದಿಂದ ನಡೆದುಕೊಂಡ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಯಾರೆಂಬುದನ್ನು ಇಂದಿರಾ ಕ್ಯಾಂಟಿನ್ ಉದ್ಘಾಟನಾ ಸಮಾರಂಭದ ವೇಳೆ ಮಾಡಿದ ವೀಡಿಯೊ ಚಿತ್ರೀಕರಣದ ಮೂಲಕ ತಿಳಿಯಬಹುದು. ತಕ್ಷಣ ಅದನ್ನು ವಶಕ್ಕೆ ಪಡೆದು ಸಂಬಂಧಪಟ್ಟಂತಹ ಪೊಲೀಸರನ್ನು ತಕ್ಷಣ ಅಮಾನತು ಮಾಡಬೇಕೆಂದು ದೂರಿನಲ್ಲಿ ಅವರು ಎಸ್ಪಿಯನ್ನು ಒತ್ತಾಯಿಸಿದ್ದು, ಸೂಕ್ತ ಕ್ರಮ ವಹಿಸದಿದ್ದಲ್ಲಿ ಶಿಷ್ಠಾಚಾರ ಉಲ್ಲಂಘನೆ ಬಗ್ಗೆ ರಾಜ್ಯಪಾಲರು ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News