ವನ್ಯಜೀವಿಗಳ ಅಂಗಾಂಗ ಮಾರಾಟ ಆರೋಪ: ಇಬ್ಬರ ಬಂಧನ

Update: 2018-12-16 12:55 GMT

ಚಿಕ್ಕಮಗಳೂರು, ಡಿ.16: ಗಿಡಮೂಲಿಕೆಗಳ ಮಾರಾಟದ ನೆಪದಲ್ಲಿ ವನ್ಯಜೀವಿಗಳ ಅಂಗಾಂಗಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಇಬ್ಬರು ಆರೋಪಿಗಳನ್ನು ನಗರದ ಅರಣ್ಯಾಧಿಕಾರಿಗಳು ಬಂಧಿಸಿದ್ದು, ಆರೋಪಿಗಳಿಂದ ಆರು ಗಂಡು ಉಡದ ಗುಪ್ತಾಂಗ ಸೇರಿದಂತೆ ಚಿಪ್ಪು ಹಂದಿಯ ಮೂರು ಚಿಪ್ಪುಗಳು, ಪಕ್ಷಿಗಳ ಸೆರೆ ಹಿಡಿಯಲು ಬಳಸುವ ಸಾಧನಗಳನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ.

ಗಿಡಮೂಲಿಕೆಗಳ ಮಾರಾಟದ ನೆಪದಲ್ಲಿ ವನ್ಯಜೀವಿಗಳ ಅಂಗಾಂಗಗಳನ್ನು ಗುಪ್ತವಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ಬಗ್ಗೆ ಪರಿಸರ ಸಂಘಟನೆಗಳ ಸದಸ್ಯರು ನಗರದ ವಲಯಾರಣ್ಯಾಧಿಕಾರಿ ಶಿಲ್ಪಾ ಅವರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದ್ದು, ಖಚಿತ ಮಾಹಿತಿ ಪಡೆದ ಅರಣ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಗ್ರಾಹಕರ ಸೋಗಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯು ಎಸ್ಪಿ ಕಚೇರಿ ಬಳಿ ಗಿಡಮೂಲಿಕೆ ಮಾರಾಟ ಮಾಡುತ್ತಿದ್ದಲ್ಲಿಗೆ ತೆರಳಿ ವ್ಯವಹರಿಸಿದಾಗ ವನ್ಯಜೀವಿಗಳ ಭೇಟೆಯಾಡಿ ಅವುಗಳ ಅಂಗಾಂಗಗಳನ್ನು ಮಾರಾಟ ಮಾಡುತ್ತಿದ್ದ ಕೃತ್ಯ ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ.

ಘಟನೆ ಸಂಬಂಧ ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ರಾಮು ಮತ್ತು ವೆಂಕಟೇಶ್ ಎಂಬವರನ್ನು ಬಂಧಿಸಲಾಗಿದ್ದು, ಇವರು ನಗರದ ದಂಟರಮಕ್ಕಿ ಬಡಾವಣೆ ಸಮೀಪದಲ್ಲಿ ಹಾಕಿಕೊಂಡಿದ್ದ ವಾಸದ ಟೆಂಟ್‍ಗಳ ಮೇಲೂ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದು, ಅಲ್ಲಿಯೂ ಅಪರೂಪದ ವನ್ಯಜೀವಿಗಳ ಅಂಗಾಂಗಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. 

ಈ ಆರೋಪಿಗಳು ಕಳೆದೊಂದು ವಾರದಿಂದ ನಗರದ ವಿವಿಧ ವೃತ್ತಗಳಲ್ಲಿ ಸ್ಟೀಲ್ ಡಬ್ಬಿಗಳಲ್ಲಿ ಕೆಲವು ಗಿಡಮೂಲಿಕೆ ಔಷಧಗಳನ್ನು ಮಾರಾಟ ಮಾಡುತ್ತಾ, ಇದರೊಂದಿಗೆ ಅಪರೂಪದ ವನ್ಯಜೀವಿಗಳ ಅಂಗಾಂಗಗಳನ್ನು ಮಾರಾಟ ಮಾಡುತ್ತಿದ್ದರೆಂದು ಅರಣ್ಯಾಧಿಕಾರಿ ಶಿಲ್ಪಾ ತಿಳಿಸಿದ್ದು, ಬಂಧಿತರ ವಿರುದ್ಧ ವನ್ಯಜೀವಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಶಿಲ್ಪಾ, ಅರಣ್ಯ ರಕ್ಷಕರಾದ ನಾರಾಯಣ್, ಇಮ್ತಿಯಾಝ್, ರಶೀದ್, ಸಿದ್ದಪ್ಪ, ವಾಹನ ಚಾಲಕ ಮುಹಮ್ಮದ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News