ಲೋಪದೋಷ ಮುಕ್ತ ಮತದಾರರ ಪಟ್ಟಿ ಸಿದ್ಧಪಡಿಸುವತ್ತ ಗಮನ ಹರಿಸಬೇಕು: ಶಾಲಿನಿ ರಜನೀಶ್

Update: 2018-12-16 13:52 GMT

ಶಿವಮೊಗ್ಗ, ಡಿ. 16: ಸಂಪೂರ್ಣ ಲೋಪದೋಷ ಮುಕ್ತ ಮತದಾರರ ಪಟ್ಟಿ ಸಿದ್ದಪಡಿಸುವತ್ತ ಜಿಲ್ಲೆಯ ಸಂಬಂಧಿಸಿದ ಅಧಿಕಾರಿ-ಸಿಬ್ಬಂದಿಗಳು ಆದ್ಯ ಗಮನಹರಿಸಬೇಕು. ಒಂದೇ ಒಂದು ತಪ್ಪಿಗೆ ಆಸ್ಪದವಿಲ್ಲದಂತೆ ಮತದಾರರ ಪಟ್ಟಿ ಸಿದ್ದಪಡಿಸಬೇಕು ಎಂದು ರಾಜ್ಯ ಸರ್ಕಾರದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಶಿವಮೊಗ್ಗ ಜಿಲ್ಲೆಯ ಮತದಾರರ ಪಟ್ಟಿ ಪರಿಷ್ಕರಣೆ ವೀಕ್ಷಕರಾದ ಡಾ. ಶಾಲಿನಿ ರಜನೀಶ್‍ರವರು ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. 

ರವಿವಾರ ಜಿಲ್ಲೆಯ ಭದ್ರಾವತಿ ಪಟ್ಟಣದ ತಾಲೂಕು ಪಂ. ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕುರಿತಂತೆ ಸಂಬಂಧಿಸಿದ ಅಧಿಕಾರಿ-ಸಿಬ್ಬಂದಿಗಳಿಗೆ ಆಯೋಜಿಸಲಾಗಿದ್ದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಮತದಾರರ ಪಟ್ಟಿಯಲ್ಲಿ ಕಂಡುಬರುವ ಸಣ್ಣಪುಟ್ಟ ಲೋಪಗಳು, ಹಲವು ರೀತಿಯ ಆರೋಪ-ಗೊಂದಲಗಳಿಗೆ ಕಾರಣವಾಗುತ್ತದೆ. ಹಲವು ದಿನಗಳ ಕಾಲ ಶ್ರಮವಹಿಸಿ ಮಾಡಿದ ಕೆಲಸವೆಲ್ಲ ವ್ಯರ್ಥವಾಗುವಂತೆ ಮಾಡುತ್ತದೆ. ಈ ಕಾರಣದಿಂದ ಒಂದೇ ಒಂದು ತಪ್ಪಿಗೂ ಆಸ್ಪದವಿಲ್ಲದಂತೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ನಡೆಸಬೇಕು ಎಂದು ಅಧಿಕಾರಿ-ಸಿಬ್ಬಂದಿಗಳಿಗೆ ಕಿವಿಮಾತು ಹೇಳಿದರು. 

ಒಂದೇ ಕುಟುಂಬದ ಮತದಾರರು ಬೇರೆ ಬೇರೆ ಬೂತ್‍ಗಳಲ್ಲಿ ಮತ ಹಾಕುವಂತಾಗಬಾರದು. ಆ ಕುಟುಂಬದ ಸದಸ್ಯರು ಒಂದೇ ಬೂತ್‍ನಲ್ಲಿ ತಮ್ಮ ಹಕ್ಕು ಚಲಾಯಿಸುವಂತಾಗಬೇಕು. ಈ ನಿಟ್ಟಿನಲ್ಲಿ ಕಂದಾಯ ಇಲಾಖೆಯ ಬಳಿಯಿರುವ ವಂಶವೃಕ್ಷವನ್ನು ಗಮನದಲ್ಲಿಟ್ಟುಕೊಂಡು ಪಟ್ಟಿ ಪರಿಷ್ಕರಿಸಬೇಕು ಎಂದರು. 
ಯಾವುದೇ ಕಾರಣಕ್ಕೂ ಒಂದು ಕುಟುಂಬದ ಮತದಾರರು ಬೇರೆ ಬೇರೆ ಬೂತ್‍ಗಳಲ್ಲಿ ಮತ ಚಲಾವಣೆ ಮಾಡುವಂತಾಗಬಾರದು ಎಂದು ಚುನಾವಣಾ ಆಯೋಗ ಕೂಡ ಸ್ಪಷ್ಟ ನಿರ್ದೇಶನ ರವಾನಿಸಿದೆ. ಜಿಲ್ಲಾಧಿಕಾರಿಗಳು ಈ ವಿಷಯದ ಬಗ್ಗೆ ಆದ್ಯ ಗಮನಹರಿಸಬೇಕು ಎಂದು ತಿಳಿಸಿದರು. 

ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ್, ಅಪರ ಜಿಲ್ಲಾಧಿಕಾರಿ ಜಿ. ಅನುರಾಧ, ಜಿಲ್ಲಾ ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವರಾಮೇಗೌಡ, ಉಪ ವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ಸೇರಿದಂತೆ ಭದ್ರಾವತಿ ತಾಲೂಕು ಆಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು. 

ಮತಗಟ್ಟೆಗಳಿಗೆ ಭೇಟಿಯಿತ್ತು ಪರಿಶೀಲನೆ
ಭದ್ರಾವತಿ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಸಭೆಯನ್ನು ಡಾ. ಶಾಲಿನಿ ರಜನೀಶ್ ನಡೆಸಿದರು. ಈ ವೇಳೆ ಪಟ್ಟಣದ ಕೆಲ ವಾರ್ಡ್‍ಗಳ ಪ್ರದೇಶ ಹಾಗೂ ಮತದಾರರ ಪಟ್ಟಿ ವ್ಯತ್ಯಾಸದ ಕುರಿತಂತೆ ಕೆಲ ಮುಖಂಡರು ಅಹವಾಲು ಸಲ್ಲಿಸಿದರು. ಸಭೆಯ ನಂತರ ಪಟ್ಟಣದ 8 ನೇ ವಾರ್ಡ್‍ನ ಮತಗಟ್ಟೆಗೆ ಅವರು ಖುದ್ದು ಭೇಟಿಯಿತ್ತು ಮಾಹಿತಿ ಕಲೆ ಹಾಕಿದರು. ಕಾನೂನು ರೀತಿಯ ಮತದಾರರ ಪಟ್ಟಿ ಸಿದ್ದಪಡಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದರು. 

ತದನಂತರ ಅವರು ಭದ್ರಾವತಿ ತಾಲೂಕಿನ ವೀರಾಪುರ, ಕೂಡ್ಲಿಗೆರೆ ಮತಗಟ್ಟೆಗಳಿಗೆ ಭೇಟಿಯಿತ್ತು ಚುನಾವಣಾ ಆಯೋಗದ ಮಾಹಿತಿ ಪತ್ರಗಳ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಶಿವಮೊಗ್ಗ ಉಪ ವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News