ನಾನು ಬಂದು ಏನು ಮಾಡುತ್ತಿದ್ದೆ?: ವಿವಾದ ಸೃಷ್ಟಿಸಿದ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಹೇಳಿಕೆ

Update: 2018-12-16 18:18 GMT

ಮೈಸೂರು,ಡಿ.16: ಆಸ್ಪತ್ರೆಯಲ್ಲಿ ಅಸ್ವಸ್ಥರಾಗಿರುವವರನ್ನು ವೈದ್ಯರು ನೋಡಿಕೊಳ್ಳುತ್ತಿದ್ದಾರೆ. ನನಗಿಂತ ದೊಡ್ಡ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು ಬಂದು ನೋಡಿ ಹೋಗಿದ್ದಾರೆ. ನನಗೆ ಇದರ ಮಾಹಿತಿ ನಿನ್ನೆಯಷ್ಟೇ ಗೊತ್ತಾಯಿತು. ನಂತರ ತಕ್ಷಣ ಇಲ್ಲಿಗೆ ಬಂದಿದ್ದೇನೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಹೇಳಿಕೆ ನೀಡಿದರು.

ಅವರು ಹನೂರು ತಾಲೂಕು ಸುಳ್ವಾಡಿ ಗ್ರಾಮದ ಮಾರಮ್ಮನ ದೇವಸ್ಥಾನದಲ್ಲಿ ಪ್ರಸಾದ ಸ್ವೀಕರಿಸಿ ಅಸ್ವಸ್ಥರಾಗಿ ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ರವಿವಾರ ಭೇಟಿ ಮಾಡಿ ಸ್ವಾಂತನ ಹೇಳಿ, ಅಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ಕೆ.ಆರ್.ಆಸ್ಪತ್ರೆ ಆವರಣದಲ್ಲಿ ಮಾತನಾಡಿದ ಅವರನ್ನು 44 ಗಂಟೆ ತಡವಾಗಿ ಬಂದಿರುವ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಅವರು, ನನಗೆ ನಿನ್ನೆಯಷ್ಟೇ ವಿಚಾರ ಗೊತ್ತಾಯಿತು. ಸಂಜೆ 4 ಗಂಟೆ ಸಮಯದಲ್ಲಿ ನಾನು ವಿಜಾಪುರದಲ್ಲಿದ್ದಾಗ ವಿಷಪ್ರಶಾಣದಿಂದ ಸಾವನ್ನಪ್ಪಿದ್ದಾರೆ ಎಂಬುದು ತಿಳಿಯಿತು ಎಂದರು. 

ಓರ್ವ ಆರೋಗ್ಯ ಸಚಿವರಾಗಿ ನಿಮಗೆ ಮಾಹಿತಿ ಇಲ್ಲವೇ ಎಂಬ ಪ್ರಶ್ನೆಗೆ, ನಾ ಬಂದು ಏನು ಮಾಡುತ್ತಿದ್ದೆ ? ವೈದ್ಯರು ನೋಡಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಬಂದು ಆರೋಗ್ಯ ವಿಚಾರಿಸಿ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಹೇಳಿದ್ದಾರೆ. ಇನ್ನು ನನಗೆ ಗೊತ್ತಾದ ತಕ್ಷಣ ಬಂದಿದ್ದೇನೆ. ವಿಜಾಪುರದಿಂದ ಬರಬೇಕಾದ್ದರಿಂದ ಸ್ವಲ್ಪ ತಡವಾಗಿದೆ ಎಂದು ಸಮರ್ಥಿಸಿಕೊಂಡರು.

ಈಗಾಗಲೇ ಅಸ್ವಸ್ಥಗೊಂಡವರಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ 6 ರಿಂದ 7 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಸರ್ಕಾರದಿಂದ ಈಗಾಗಲೇ ಮೃತರ ಕುಟುಂಬಳಿಗೆ 5 ಲಕ್ಷ ರೂ. ಪರಿಹಾರ ನೀಡಲಾಗಿದೆ. ಕೆಪಿಸಿಸಿ ವತಿಯಿಂದಲೂ 1 ಲಕ್ಷ ರೂ. ನೀಡಲಾಗಿದೆ. ಅಗತ್ಯ ಬಿದ್ದರೆ ಹೆಚ್ಚಿನ ನೆರವನ್ನು ಸರ್ಕಾರದಿಂದ ನೀಡಲಾಗುತ್ತದೆ. ಹೆಚ್ಚಿನ ವಿಷದ ಅಂಶ ದೇಹದೊಳಗೆ ಸೇರಿದ ಹಿನ್ನಲೆಯಲ್ಲಿ ಚಿಂತಾಜನಕವಾಗಿರುವವರ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದರು.

ಸಚಿವರ ಜೊತೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ, ಸಂಸದ ಆರ್.ಧ್ರುವನಾರಾಯಣ, ಶಾಸಕ ನರೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮೃತ ಕುಟುಂಬಕ್ಕೆ ಜಿಟಿಡಿ ನೆರವು: ಉನ್ನತ ಶಿಕ್ಷಣ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅಸ್ವಸ್ಥಗೊಂಡಿರುವವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಧೈರ್ಯ ಹೇಳಿದರು. ಇದೇ ವೇಳೆ ಅಪೋಲೋ ಆಸ್ಪತ್ರೆಯಲ್ಲಿ ಇಂದು ಮೃತರಾದ ಇಬ್ಬರ ಕುಟುಂಬಗಳಿಗೆ ಶವಸಂಸ್ಕಾರಕ್ಕಾಗಿ ವೈಯಕ್ತಿಕವಾಗಿ 10 ಸಾವಿರ ರೂ. ಗಳ ನೆರವು ನೀಡಿದರು. ಮೃತದೇಹಗಳನ್ನು ಅಪೋಲೋ ಆಸ್ಪತ್ರೆಯಿಂದ ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ತಂದು ಮರಣೋತ್ತರ ಪರೀಕ್ಷೆ ನಡೆಸಿ ನಂತರ ವಾರಸುದಾರರಿಗೆ ಒಪ್ಪಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News