ರಾಜ್ಯದ ಆರೋಗ್ಯ ಸಚಿವರಿಗೆ ಚಿಕಿತ್ಸೆ ಕೊಡಿಸಬೇಕಿದೆ: ವಾಟಾಳ್ ನಾಗರಾಜ್

Update: 2018-12-16 18:13 GMT

ಮೈಸೂರು,ಡಿ.16: ರಾಜ್ಯದ ಆರೋಗ್ಯ ಸಚಿವರಿಗೆ ಆರೋಗ್ಯ ಸರಿಯಿಲ್ಲ. ಮೊದಲು ಅವರಿಗೆ ಚಿಕಿತ್ಸೆ ಕೊಡಿಸಬೇಕಿದೆ ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಕಿಡಿಕಾರಿದರು.

ನಗರದ ಕೆ.ಆರ್.ಆಸ್ಪತ್ರೆಗೆ ರವಿವಾರ ಭೇಟಿ ನೀಡಿ ಸುಳ್ವಾಡಿ ಮಾರಮ್ಮನ ದೇವಸ್ಥಾನದ ಪ್ರಸಾದ ಸೇವಿಸಿ ಅಸ್ವಸ್ಥರಾದವರಿಗೆ ಸಾಂತ್ವನ ಹೇಳಿ ವೈದ್ಯರಿಂದ ಆರೋಗ್ಯದ ಕುರಿತು ಮಾಹಿತಿ ಪಡೆದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಆರೋಗ್ಯ ಸಚಿವ ಶಿವಾನಂದ ಪಾಟೀಲ್‍ಗೆ ತಲೆ ಕೆಟ್ಟುಹೋಗಿದೆ. ಅವರು ನಿಮ್ಹಾನ್ಸ್ ನಲ್ಲಿ ಇರಬೇಕಿತ್ತು, ಪಾಪ ಆರೋಗ್ಯ ಸಚಿವರಾಗಿದ್ದಾರೆ. ಓರ್ವ ಸಚಿವ ಜವಾಬ್ದಾರಿಯಿಂದ ಮಾತನಾಡಬೇಕು. ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಿರುವ ಸಚಿವರ ರಾಜೀನಾಮೆಯನ್ನು ಕೂಡಲೇ ಪಡೆಯಬೇಕು ಎಂದು ಹೇಳಿದರು.

ರಾಜ್ಯದ ಬಹುತೇಕ ಜಿಲ್ಲಾಸ್ಪತ್ರೆಗಳು ಶವಗಾರದಂತಾಗಿವೆ. ಅಲ್ಲಿ ರೋಗಿಗಳಿಗೆ ಚಿಕಿತ್ಸೆ ಕೊಡುವ ವ್ಯವಸ್ಥೆಗಳೇ ಇಲ್ಲ, ಇನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಯನ್ನು ಶವಗಾರ ಮಾಡಿದರೆ ಒಳ್ಳೆಯದು. ಉತ್ತಮ ವ್ಯವಸ್ಥೆ ನೀಡಬೇಕಾದ ಸರ್ಕಾರ ವಿಫಲಗೊಂಡಿದೆ. ಅಸ್ವಸ್ಥರಾದವರಿಗೆ ತಕ್ಷಣ ಉತ್ತಮ ಚಿಕಿತ್ಸೆ ನಿಡಿದ್ದರೆ ಸಾಯುತ್ತಿರಲಿಲ್ಲ. ಈ ಘಟನೆ ಸಂಬಂಧ ಉನ್ನತ ಮಟ್ಟದ ತನಿಖೆಯಾಗಬೇಕು. ಹೈಕೋರ್ಟ್‍ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಈ ವಿಚಾರವನ್ನು ಬೆಳಗಾವಿ ಅಧಿವೇಶನದಲ್ಲಿ ವಿಶೇಷ ಚರ್ಚೆ ಮಾಡಬೇಕು. ಡಿ.19 ರಂದು ಬೆಳಗಾವಿ ಸುವರ್ಣಸೌಧದ ಮುಂಭಾಗ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿ ಧರಣಿ ಸತ್ಯಾಗ್ರಹ ಮಾಡುತ್ತೇನೆ ಎಂದು ಹೇಳಿದರು.

5 ಲಕ್ಷ ಕಡ್ಲೆಪುರಿ ತಿನ್ನಲು ಸಾಕಾಗುವುದಿಲ್ಲ: ಮೃತ ಪಟ್ಟ ಕುಟುಂಬಗಳಿಗೆ ಸರ್ಕಾರದ ವತಿಯಿಂದ 5 ಲಕ್ಷ ರೂ ಪರಿಹಾರ ಘೋಷಿಸಿರುವುದು ಕಡ್ಲೆಪುರಿ ತಿನ್ನಲು ಸಾಕಾಗುವುದಿಲ್ಲ. ಮೃತ ಕುಟುಂಬಗಳಿಗೆ 15 ಲಕ್ಷ ರೂ ಪರಿಹಾರ ಕೊಡಬೇಕು. ಸತ್ತವರ ಕುಟುಂಬದ ಓರ್ವ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಬೇಕು. ಜೊತೆಗೆ ಹಳ್ಳಿಗಳಿಗೆ ಹೋಗಿ ಕರ್ತವ್ಯ ನಿರ್ವಹಿಸದ ವೈದ್ಯರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ವಾಟಾಳ್ ನಾಗರಾಜ್ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News