ರಾಷ್ಟ್ರ ರಕ್ಷಾ ಕವಚ ಈ ಸಂವಿಧಾನ

Update: 2018-12-17 06:31 GMT

ಕಳೆದ ಐದು ಸಾವಿರ ವರ್ಷಗಳಿಂದ ಭಾರತಕ್ಕೆ ಹಲವಾರು ಜನಾಂಗದ ಜನ, ಭಾಷೆಯನ್ನಾಡುವ ಜನರು ವಲಸೆ ಬಂದು ನಲೆಸಿದ್ದಾರೆ. ಹೀಗಾಗಿ ವಿವಿಧ ಭಾಷೆಯನ್ನಾಡುವ, ವಿವಿಧ ಧರ್ಮಗಳ, ಜಾತಿಗಳ ಜನರು ಇಲ್ಲಿದ್ದಾರೆ. ಒಂದೇ ಧರ್ಮಕ್ಕೆ ಸೇರಿದವರು ನೆಲೆಸಿದ, ಒಂದೇ ಭಾಷೆಯನ್ನಾಡುವ ಪುಟ್ಟ ದೇಶಗಳು ಕೆಲವಿರಬಹುದು. ಭಾರತ ಅಂಥ ದೇಶವಲ್ಲ, ಜಗತ್ತಿನಲ್ಲಿ ಇಂಥ ದೇಶ ಇನ್ನೊಂದಿಲ್ಲ.


ನ್ಯಾಯಮೂರ್ತಿ ನಾಗಮೋಹನದಾಸ್ ಅವರು ‘ಸಂವಿಧಾನ ಓದು’ ಕೃತಿಯನ್ನು ರಚಿಸಿ, ಅದನ್ನು ಕೈಗೆತ್ತಿಕೊಂಡು ನಾಡಿನ ಮೂಲೆ ಮೂಲೆಗೆ ಸಂಚರಿಸುತ್ತಿದ್ದಾರೆ. ಪ್ರತೀ ಜಿಲ್ಲೆಯ ಪ್ರತೀ ತಾಲೂಕಿನ ಶಾಲೆ, ಕಾಲೇಜುಗಳಲ್ಲಿ ಪ್ರತೀ ವಿದ್ಯಾರ್ಥಿಯ ಮನದ ಬಾಗಿಲು ತಟ್ಟಿ ಸಂವಿಧಾನದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಅವರೊಂದಿಗೆ ವಿಠಲ ಭಂಡಾರಿ ಅವರಂತಹ ಯುವಕರು ಸಾಥ್ ನೀಡಿದ್ದಾರೆ. ಹೋದಲ್ಲೆಲ್ಲ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ.

ಶಾಲೆ, ಕಾಲೇಜುಗಳು ಮಾತ್ರವಲ್ಲ, ನ್ಯಾಯಾಲಯ ಸಂಕೀರ್ಣದಲ್ಲಿರುವ ವಕೀಲರ ಸಂಘದ ಸಭಾಂಗಣಗಳು, ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು, ಮಹಿಳಾ ಸಂಘಟನೆ, ಯುವ ಜನ ಸಂಘಟನೆಗಳು ಹೀಗೆ ಎಲ್ಲ್ಲೆಡೆ ನಾಗಮೋಹನದಾಸ್ ಬಿಡುವಿಲ್ಲದೆ ಓಡಾಡುತ್ತಿದ್ದಾರೆ. ನಿವೃತ್ತರಾದ ನಂತರ ಎಲ್ಲರಂತೆ ಪುರುಸೊತ್ತಾದಾಗ ವಕೀಲ ವೃತ್ತಿ ಮಾಡುವುದನ್ನು ಬಿಟ್ಟು ಈ ಪರಿ ದಣಿವಿಲ್ಲದೆ ನಾಡನ್ನು ಸುತ್ತುತ್ತಿರುವ ಇವರ ಈ ಪರಿಶ್ರಮ ಉಳಿದವರಿಗೆ ಮಾದರಿಯಾಗಿದೆ.

ನಾಗಮೋಹನದಾಸರು ಬರೆದ ‘ಸಂವಿಧಾನ ಓದು’ ಕೃತಿ ಹೊರಗೆ ಬಂದು ತೊಂಬತ್ತು ದಿನಗಳಾದವು. ಈ ಮೂರು ತಿಂಗಳಲ್ಲಿ ಇದು ಇಪ್ಪತ್ತು ಬಾರಿ ಮರು ಮುದ್ರಣಗೊಂಡಿದೆ. ಐವತ್ತು ಸಾವಿರಕ್ಕಿಂತ ಹೆಚ್ಚು ಪ್ರತಿಗಳು ಮಾರಾಟವಾಗಿವೆ. ಇದರ ಬಗ್ಗೆ ಚರ್ಚೆ, ಸಂವಾದ, ಚಿಂತನ ಮಂಥನ, ಗೋಷ್ಠಿಗಳು ಎಲ್ಲೆಡೆ ನಡೆದಿವೆ. ಸ್ವತಃ ಲೇಖಕರೇ ಎಲ್ಲೆಡೆ ಹೋಗಿ ಈ ಬಗ್ಗೆ ನಡೆಯುತ್ತಿರುವ ಗೋಷ್ಠಿಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವವೇ ನಮ್ಮ ಧರ್ಮ, ಸಂವಿಧಾನವೇ ನಮ್ಮ ಧರ್ಮಗ್ರಂಥ ಎಂಬುದನ್ನು ನಾವೆಲ್ಲ ಒಪ್ಪಿದ್ದೇವೆ. ಆದರೆ, ಸಂವಿಧಾನ ಒದಗಿಸುತ್ತಿರುವ ಎಲ್ಲ ಸೌಲಭ್ಯಗಳನ್ನು ಧಾರಾಳವಾಗಿ ಪಡೆಯುತ್ತಿರುವ ನಾವು, ಸಂವಿಧಾನ ಅಂದರೆ ಏನು, ಅದು ನಮ್ಮ ದೇಶವನ್ನು ಹೇಗೆ ಮುನ್ನಡೆಸುತ್ತಿದೆ ಎಂಬ ಬಗ್ಗೆ ತಿಳುವಳಿಕೆ ಹೊಂದಿಲ್ಲ. ಸಂವಿಧಾನದಿಂದ ತೊಂದರೆಗೊಳಗಾದ ಕೆಲ ವರ್ಗಗಳು ಕೆಲ ಹಿತಾಸಕ್ತಿಗಳು ಅದನ್ನು ವಿರೋಧಿಸುತ್ತಿವೆ. ಆದರೆ ಸಂವಿಧಾನದ ಸವಲತ್ತು ಪಡೆಯುತ್ತಿರುವ ಜನವರ್ಗಗಳೂ ಇದನ್ನು ವಿರೋಧಿಸುತ್ತಿವೆ. ಸಂವಿಧಾನ ನೀಡಿದ ಮೀಸಲು ಸೌಕರ್ಯ ಪಡೆದು ವ್ಯಾಸಂಗ ಮಾಡುತ್ತಿರುವ ವಿದ್ಯಾಥಿಗಳು, ಯುವಜನರು, ಮೀಸಲಾತಿಯಿಂದ ನೌಕರಿ ಪಡೆದು ಸುಖವಾಗಿರುವವರೂ ಕೂಡಾ, ತಮ್ಮ ಹಿರಿಯರು ಬಾಳಿದ ಹಿಂದಿನ ದಿನಗಳ ಅರಿವಿಲ್ಲದೆ ಸ್ವಾತಂತ್ರಾನಂತರ ಉದ್ಭವಿಸಿದ ನಕಲಿ ರಾಷ್ಟ್ರ ಭಕ್ತರ ಪ್ರಚೋದನಾಕಾರಿ ಮಾತುಗಳನ್ನು ಕೇಳಿ ‘ಸನಾತನ ಹಿಂದೂ ಧರ್ಮವೇ ಸಂವಿಧಾನಕ್ಕಿಂತ ಶ್ರೇಷ್ಠ’ ಎಂಬ ಅವಿವೇಕದ ಮಾತುಗಳನ್ನಾಡುತ್ತಾರೆ.

ಇಂತಹ ದಾರಿ ತಪ್ಪಿದ ವಿದ್ಯಾರ್ಥಿಗಳಿಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಸ್ವಾತಂತ್ರಾನಂತರ ‘ಸೆಕ್ಯುಲರ್’ ಎಂದು ಹೇಳಿಕೊಳ್ಳುವ ಪಕ್ಷಗಳ ಸರಕಾರಗಳು ರೂಪಿಸಲಿಲ್ಲ. ಈಗ ಸಂವಿಧಾನ ವಿರೋಧಿಗಳೇ ಕೇಂದ್ರ ಸರಕಾರದ ಅಧಿಕಾರ ಸೂತ್ರ ಹಿಡಿದು ಕೂತಿದ್ದಾರೆ. ಆವರಿಂದ ಇದನ್ನು ನಿರೀಕ್ಷಿಸುವುದು ತಪ್ಪಾಗುತ್ತದೆ.

ಬಾಬಾ ಸಾಹೇಬರ ಸಂವಿಧಾನ ಇಲ್ಲದಿರುತ್ತಿದ್ದರೆ, ನಾನಿಲ್ಲಿ ಇರುತ್ತಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರೇನೋ ಒಮ್ಮೆ ಹೇಳಿದ್ದರು. ಆದರೆ ಅದು ಅವರ ತುಟಿ ಸೇವೆಯಾಗಿತ್ತು. ಸಂವಿಧಾನಕ್ಕೆ ಬದ್ಧವಾಗಿ ಅವರು ಆಡಳಿತ ನಡೆಸಲೇ ಇಲ್ಲ. ಸಂವಿಧಾನ ಸ್ವಯತ್ತ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತ ಸಾಗಿದ್ದಾರೆ. ಭಾರತದ ಸಂವಿಧಾನ ಹೇಗೆ ರಚನೆಗೊಂಡಿತು. ಬಾಬಾ ಸಾಹೇಬ ಅಂಬೇಡ್ಕರ್ ಅವರು ಹಗಲು ರಾತ್ರಿ ಕುಳಿತು ಅದಕ್ಕೆ ಜೀವ ಸತ್ವ ನೀಡಿದರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಸಂವಿಧಾನ ಇರದಿದ್ದರೆ ಈ ದೇಶದ ದಲಿತರ ಮಾತ್ರವಲ್ಲ ಎಲ್ಲ ಸಮುದಾಯಗಳ ಬಡವರ, ಕಾರ್ಮಿಕರ, ಮಹಿಳೆಯರ ರೈತರ ಸ್ಥತಿ ಈಗಿನಂತಿರುತ್ತಿರಲಿಲ್ಲ.

ಈ ಸಂವಿಧಾನವನ್ನು ಯಾವುದೇ ಲೋಕದಿಂದ ಇಳಿದು ಬಂದವರು ರಚಿಸಿಲ್ಲ, ನಮ್ಮ ನಡುವಿದ್ದ ಬಾಬಾಸಾಹೇಬ ಅಂಬೇಡ್ಕರ್ ತಮ್ಮ ತಂಡದೊಂದಿಗೆ ರಚಿಸಿದರು. ಇದು ನಿಜವಾದ ಅರ್ಥದಲ್ಲಿ ಭಾರತವನ್ನು ಪ್ತತಿನಿಧಿಸುವ ಸಂವಿಧಾನ. ಭಾರತ ಅರ್ಥವಾದರೆ ಸಂವಿಧಾನ ಅರ್ಥವಾಗುತ್ತದೆ.
ಭಾರತ ಎಂಬುದು ಒಂದೇ ಧರ್ಮಕ್ಕೆ ಒಂದೇ ಸಮುದಾಯದವರಿಗೆ ಸೇರಿದ ದೇಶವಲ್ಲ. ಎಲ್ಲ ಸಮುದಾಯಗಳ ಜನ ಸೇರಿ ಈ ದೇಶವನ್ನು ಕಟ್ಟಿದ್ದಾರೆ.

ಕಳೆದ ಐದು ಸಾವಿರ ವರ್ಷಗಳಿಂದ ಭಾರತಕ್ಕೆ ಹಲವಾರು ಜನಾಂಗದ ಜನ, ಭಾಷೆಯನ್ನಾಡುವ ಜನರು ವಲಸೆ ಬಂದು ನಲೆಸಿದ್ದಾರೆ. ಹೀಗಾಗಿ ವಿವಿಧ ಭಾಷೆಯನ್ನಾಡುವ, ವಿವಿಧ ಧರ್ಮಗಳ, ಜಾತಿಗಳ ಜನರು ಇಲ್ಲಿದ್ದಾರೆ. ಒಂದೇ ಧರ್ಮಕ್ಕೆ ಸೇರಿದವರು ನೆಲೆಸಿದ, ಒಂದೇ ಭಾಷೆಯನ್ನಾಡುವ ಪುಟ್ಟ ದೇಶಗಳು ಕೆಲವಿರಬಹುದು. ಭಾರತ ಅಂಥ ದೇಶವಲ್ಲ, ಜಗತ್ತಿನಲ್ಲಿ ಇಂಥ ದೇಶ ಇನ್ನೊಂದಿಲ್ಲ.

 ಭಾರತದ ಸಂವಿಧಾನದಲ್ಲಿ 60ಕ್ಕೂ ಹೆಚ್ಚು ದೇಶಗಳ ಸಂವಿಧಾನಗಳ ಉತ್ತಮ ಅಂಶಗಳನ್ನು ತಗೆದುಕೊಳ್ಳಲಾಗಿದೆ; ಅಮೆರಿಕದ ನಾಗರಿಕ ಹೋರಾಟ, ಫ್ರೆಂಚ್ ಕ್ರಾಂತಿಯ ಭ್ರಾತೃತ್ವ, ಸಮಾನತೆಯ ಅಂಶಗಳು, ಸಮಾಜವಾದಿ ರಶ್ಯದ ಜೀವಪರ ತತ್ವಗಳನ್ನ್ನೂ ಅಳವಡಿಸಲಾಗಿದೆ. ಇದರೊಂದಿಗೆ ಭಾರತದ ಜನಪರ ಪರಂಪರೆಯ ಅಂಶಗಳೂ ಬೆರೆತಿವೆ. ಎಲ್ಲರೂ ಸಮಾನರು ಎಂಬುದೊಂದೇ ಸಂವಿಧಾನ ನೀಡಿದ ಸಂದೇಶ. ಅಂತಲೇ ಹಿಂದೂಗಳಿಗೆ ಭಗವದ್ಗೀತೆ ಇರಬಹುದು, ಮುಸಲ್ಮಾನರಿಗೆ ಕುರ್‌ಆನ್ ಇರಬಹುದು, ಕ್ರೈಸ್ತರಿಗೆ ಬೈಬಲ್ ಇರಬಹುದು, ಸಿಖ್ಖರಿಗೆ ಗುರುಗ್ರಂಥ ಸಾಹೀಬ್ ಇರಬಹುದು, ಆದರೆ ಈ ಎಲ್ಲ ಧರ್ಮೀಯರು ನೆಲೆಸಿರುವ ಭಾರತಕ್ಕೆ ಸಂವಿಧಾನವೇ ಧರ್ಮಗ್ರಂಥ.

ಕೋಟಿ ಕೋಟಿ ಭಾರತೀಯರಿಗೆ ಬೆಳಕು ನೀಡಿದ ಸಂವಿಧಾನದ ಸಂದೇಶವನ್ನು ಜನ ಸಾಮಾನ್ಯರಿಗೆ ತಲುಪಿಸಲು ನ್ಯಾಯಮೂರ್ತಿ ನಾಗಮೋಹನದಾಸರು ನಾಡಿನುದ್ದಗಲಕ್ಕೂ ಸಂಚರಿಸುತ್ತಿದ್ದಾರೆ. ಇನ್ನೊಂದೆಡೆ ಇದೇ ಸಂವಿಧಾನಕ್ಕೆ ನಿಷ್ಠೆ ಹೊಂದಿರುವುದಾಗಿ ಪ್ರಮಾಣವಚನ ಸ್ವೀಕರಿಸಿದ ನ್ಯಾಯಾಧೀಶರೊಬ್ಬರು ಸಂವಿಧಾನದ ಬಗ್ಗೆ ಅಪಸ್ವರ ತೆಗೆದಿದ್ದಾರೆ.

ಮೇಘಾಲಯ ಹೈಕೋರ್ಟ್‌ನ ನ್ಯಾಯಾಧೀಶ ಎಸ್.ಆರ್.ಸೇನ್ ಎಂಬ ಮಹಾಶಯ ಇತ್ತೀಚೆಗೆ ಅನಗತ್ಯವಾಗಿ ‘‘ದೇಶ ವಿಭಜನೆ ನಂತರ ಪಾಕಿಸ್ತಾನ ಇಸ್ಲಾಮ್ ರಾಷ್ಟ್ರವಾಯಿತು. ಭಾರತ ಹಿಂದೂ ರಾಷ್ಟ್ರವಾಗಬೇಕಾಗಿತ್ತೆಂದು’’ ಹೇಳಿದರು. ‘‘ಮೊಘಲರು ಬರುವವರೆಗೆ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನಗಳು ಒಂದೇ ಹಿಂದೂ ಸಾಮ್ರಾಜ್ಯಕ್ಕೆ ಒಳಪಟ್ಟಿದ್ದವು’’ ಎಂದು ಹೇಳಿದರು.

ಬಹುಶಃ ಈ ಸೇನ್ ಎಂಬ ನ್ಯಾಯಾಧೀಶ ಸಂಘದ ಶಾಖೆಯಲ್ಲಿ ಬೆಳೆದು ಬಂದಿರಬೇಕು. ಇತಿಹಾಸದ ಬಗ್ಗೆ ಅರಿವಿಲ್ಲದೆ ಹಿಂದೂ ಸಾಮ್ರಾಜ್ಯದ ಕನಸನ್ನು ಈತ ಕಾಣುತ್ತಿದ್ದಾರೆ. ವಾಸ್ತವವಾಗಿ ಬ್ರಿಟಿಷರು ಬರುವ ಮುಂಚೆ ಅಖಂಡ ಭಾರತ ಎಂಬುದಿರಲಿಲ್ಲ. ಬ್ರಿಟಿಷರು ಬಂದ ನಂತರ ಏಕರೂಪದ ಆಡಳಿತ ವ್ಯವಸ್ಥೆ ಬಂತು. ಅದಕ್ಕಿಂತ ಮುಂಚೆ ಗುಪ್ತರ ಭಾರತ ಬೇರೆ, ವೌರ್ಯರ ಭಾರತ ಬೇರೆ. ಹಾಗೆ 600 ಸಂಸ್ಥಾನಗಳಲ್ಲಿ ಹರಿದು ಹಂಚಿಹೋದವು.

ಇದ್ಯಾವುದರ ಅರಿವಿಲ್ಲದೆ, ನ್ಯಾಯಾಂಗದ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬ ತಾನು, ತಾನು ಕುಳಿತ ಪೀಠದ ಮಹತ್ವವನ್ನು ಅರಿಯದೆ ಈ ರೀತಿ ಅನಪೇಕ್ಷಿತ ಅವಿವೇಕದ, ಆಕ್ರಮಣಕಾರಿ ಹೊಡೆತ ನೀಡುವುದು ಸರಿಯಲ್ಲ. ನ್ಯಾಯಾಂಗದ ಶಿಸ್ತು, ಸಂಹಿತೆಯಲ್ಲಿ ದ್ರೋಹ ಬಗೆಯುವುದು ಅಸಭ್ಯತನ ಮಾತ್ರವಲ್ಲ ಅಕ್ರಮ ನಡೆಯಾಗುತ್ತದೆ.

ಇಷ್ಟೊಂದು ವಿಷ ತುಂಬಿಕೊಂಡ ಈ ಮನುಷ್ಯ ನ್ಯಾಯಾಂಗದ ಉನ್ನತ ಸ್ಥಾನದಲ್ಲಿ ಕುಳಿತು ಎಂತಹ ತೀರ್ಪು ನೀಡುತ್ತಾರೆೆ. ಸಂವಿಧಾನದ ಸೆಕ್ಯುಲರ್ ಅಡಿಪಾಯವನ್ನೇ ಪ್ರಶ್ನಿಸುವ ಈತ ತನ್ನ ಪೀಠಕ್ಕೆ ತಾನೇ ಅವಮಾನ ಮಾಡಿದ್ದಾರೆೆ. ರಾಜ್ಯಾಂಗವನ್ನೇ ಪ್ರಶ್ನಿಸುವ ಈತ ಒಂದು ಕ್ಷಣವೂ ಅಧಿಕಾರದಲ್ಲಿರಬಾರದು. ಸರಕಾರ ತಕ್ಷಣ ಈತನನ್ನು ವಜಾ ಮಾಡಬೇಕು. ಈತ ಬೇಕಾದರೆ ಶಾಖೆಗೆ ಹೋಗಿ ದಂಡ ಪ್ರಣಾಮ ಮಾಡಲಿ. ಇದು ನಮ್ಮ ಒಬ್ಬ ನ್ಯಾಯಾಧೀಶನ ಕತೆಯಲ್ಲ. ನಮ್ಮ ದೇಶದ ಇತ್ತೀಚಿನ ಪೀಳಿಗೆಯ ಅನೇಕರಲ್ಲಿ ಸಂವಿಧಾನ ವಿರೋಧಿ ಮಾತುಗಳು ಕೇಳಿ ಬರುತ್ತಿವೆ. ಹಿಂದುತ್ವದ ನಶೆಯನ್ನು ಏರಿಸಿಕೊಂಡಿರುವ ಅನೇಕ ವಿದ್ಯಾರ್ಥಿ ಯುವಜನರು ‘‘ಈ ಸಂವಿಧಾನ ಬೇಡ. ಸನಾತನ ಹಿಂದೂ ಧರ್ಮ ಬೇಕು’’ ಎಂದು ಮಾತಾಡುತ್ತಿದ್ದಾರೆ.

ಇದು ಅವರ ತಪ್ಪಲ್ಲ. ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ನಾವ್ಯಾರೂ ಮಾಡಲಿಲ್ಲ. ಬಿಳಿಹಾಳೆಯಂತಿರುವ ಈ ಮಕ್ಕಳ ಮನಸ್ಸಿನಲ್ಲಿ ಮನುವಾದಿಗಳು ಸನಾತನ ಹಿಂದುತ್ವದ ವಿಷ ತುಂಬಿದರು. ಅದರ ಪರಿಣಾಮವಾಗಿ ಪರಶುರಾಮ ವಾಗ್ಮೋರೆ ಅಂಥವರು ತಯಾರಾದರು. ದಾಭೋಲ್ಕರ್, ಪನ್ಸಾರೆ, ಕಲಬುರ್ಗಿ, ಗೌರಿ ಲಂಕೇಶ್‌ರಂಥವರು ಗುಂಡಿಗೆ ಬಲಿಯಾದರು. ಈಗ ತಡವಾಗಿಯಾದರೂ ನ್ಯಾಯಮೂರ್ತಿ ನಾಗಮೋಹನದಾಸ್ ಸಂವಿಧಾನ ರಕ್ಷಣೆಗೆ ದೀವಟಿಗೆ ಹಿಡಿದು ಹೊರಟಿದ್ದಾರೆ. ನಮ್ಮ ಮನಸ್ಸಿನ ಬಾಗಿಲು ತಟ್ಟುತ್ತಿದ್ದಾರೆ. ಅವರ ಕರೆಗೆ ಸ್ಪಂದಿಸೋಣ. ಸಂವಿಧಾನ ರಕ್ಷಣೆ ಮಾಡಿದರೆ ಅದು ನಮ್ಮನ್ನು ರಕ್ಷಿಸುತ್ತದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News