ಹನೂರು ದೇವಸ್ಥಾನದಲ್ಲಿ ವಿಷ ಪ್ರಸಾದ ಪ್ರಕರಣ: ಸಾವಿನ ಸಂಖ್ಯೆ 15ಕ್ಕೆ ಏರಿಕೆ
ಹನೂರು,ಡಿ.17: ಸೂಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮನ ದೇವಸ್ಥಾನದಲ್ಲಿ ಡಿ.14ರಂದು ಪ್ರಸಾದ ಸೇವಿಸಿ 100ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು. ಈ ಪೈಕಿ ಮೃತಪಟ್ಟವರ ಸಂಖ್ಯೆ ಸೋಮವಾರ 15 ಕ್ಕೆ ಏರಿಕೆಯಾಗಿದೆ. ಹಲವರ ಸ್ಥಿತಿ ಇನ್ನೂ ಗಂಭೀರವಾಗಿದ್ದು, ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಲೂಕಿನ ಮಾರ್ಟಳ್ಳಿ ಸಮೀಪದ ಕೋಟೆಪೋದೆ ಗ್ರಾಮದ ನಿವಾಸಿ ಮೈಲಾಬಾಯಿ (38) ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಸೋಮವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮೂವರು ಮಕ್ಕಳು ಅನಾಥ: ಮಾರಮ್ಮನ ದೇವಸ್ಥಾನಕ್ಕೆ ಕೋಟೆಪೋದೆ ಗ್ರಾಮದವರಾದ ಕೃಷ್ಣನಾಯಕ ಹಾಗೂ ತನ್ನ ಪತ್ನಿ ಮೈಲಾಬಾಯಿ, ಮಗಳು ಪ್ರಿಯಾ ಜೊತೆ ಆಗಮಿಸಿ ಪೂಜೆ ಸಲ್ಲಿಸಿದ ಬಳಿಕ ಪ್ರಸಾದ ಸ್ವೀಕರಿಸಿದ್ದರು. ನಂತರ ಅಸ್ವಸ್ಥರಾಗಿ ಶನಿವಾರ ಚಿಕಿತ್ಸೆ ಫಲಕಾರಿಯಾಗದೇ ಕೃಷ್ಣನಾಯಕ ಮೃತಪಟ್ಟಿದ್ದರು. ಇಂದು ಅವರ ಪತ್ನಿ ಮೈಲಾಬಾಯಿಯೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರಿಗೆ ಮೂವರು ಮಕ್ಕಳಿದ್ದು, ಅದರಲ್ಲಿ ಎರಡನೇ ಪುತ್ರಿ ಇವರ ಜೊತೆಯಲ್ಲಿ ಪ್ರಸಾದ ಸೇವಿಸಿ ಅಸ್ವಸ್ಥರಾಗಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ದಂಪತಿಯ ಮೊದಲನೇ ಮಗಳು ರಾಣಿಬಾಯಿ ಮೈಸೂರಿನ ಕಾಲೇಜುಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾಳೆ. ಎರಡನೇ ಮಗಳು ಪ್ರಿಯಾ ಮೈಸೂರಿನಲ್ಲಿ ನರ್ಸಿಂಗ್ ಮಾಡುತ್ತಿದ್ದಳು. ಮೂರನೇ ಮಗ ರಾಜೇಶ್ ಕೆಎಂ ದೊಡ್ಡಿಯಲ್ಲಿ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾನೆ. ಇದೀಗ ಈ ಮೂವರು ಮಕ್ಕಳೂ ತಂದೆ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ.
ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿ ಮತ್ತೆ ಆಸ್ಪತ್ರೆಗೆ: ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಿಯಾ ತನ್ನ ಸ್ವಗ್ರಾಮಕ್ಕೆ ಆ್ಯಂಬುಲೆನ್ಸ್ ನಲ್ಲಿ ಆಗಮಿಸಿ ತಾಯಿಯ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿ ಮತ್ತೆ ಮೈಸೂರಿಗೆ ಹಿಂದಿರುಗಿದ್ದಾಳೆ. ಜಿಲ್ಲಾಧಿಕಾರಿ ಬಿ.ಬಿ ಕಾವೇರಿ ಹಾಗೂ ಜೆಡಿಎಸ್ ಮುಖಂಡ ಮಂಜುನಾಥ್, ಕಾಂಗ್ರೆಸ್ ಮುಖಂಡ ಈಶ್ವರ್ ಸೇರಿ ಹಲವರು ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿ ಮೃತರ ಕುಟಂಬಕ್ಕೆ ಹಾಗೂ ಮಕ್ಕಳಿಗೆ ದೈರ್ಯ ತುಂಬಿದರು.
ವಿಚಾರಣೆ: ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನ ಟ್ರಸ್ಟ್ ಕಾರ್ಯದರ್ಶಿ ಶಶಿಬಿಂಬನನ್ನು ಈ ಘಟನೆ ಸಂಬಂಧ ಚಾಮರಾಜನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.