ಗೋವಾದೊಂದಿಗೆ ಸಚಿವ ದೇಶಪಾಂಡೆ ಮಾತುಕತೆ ಫಲಪ್ರದ: ಲಘು ವಾಹನಗಳಲ್ಲಿ ಗೋವಾಕ್ಕೆ ಮೀನು ಸಾಗಣೆಗೆ ಮುಕ್ತ ಅವಕಾಶ

Update: 2018-12-17 14:19 GMT

ಬೆಳಗಾವಿ, ಡಿ. 17: ಕರ್ನಾಟಕ ರಾಜ್ಯದಿಂದ ಗೋವಾಕ್ಕೆ ನಾಲ್ಕು ಚಕ್ರದ ವಾಹನಗಳು ಸೇರಿದಂತೆ ಲಘು ವಾಹನಗಳಲ್ಲಿ ಮೀನು ಸಾಗಣೆ ಮಾಡಲು ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.

ಸೋಮವಾರ ಮಾತನಾಡಿದ ಅವರು, ಗೋವಾ ಸರಕಾರವು ಇತ್ತೀಚೆಗೆ ಫಾರ್ಮಾಲಿನ್ ಅಂಶ ಹೆಚ್ಚಾಗಿರುತ್ತದೆ ಎನ್ನುವ ಕಾರಣ ಹಿನ್ನೆಲೆಯಲ್ಲಿ ಅನ್ಯ ರಾಜ್ಯಗಳಿಂದ ತನ್ನಲ್ಲಿಗೆ ಬರುತ್ತಿರುವ ಮೀನು ಸಾಗಣೆಗೆ ನಿರ್ಬಂಧ ವಿಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇದರಿಂದಾಗಿ ರಾಜ್ಯದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡದ ಮೀನು ವ್ಯಾಪಾರಿಗಳಿಗೆ ಅನಾನುಕೂಲವಾಗಿತ್ತು.

ಈ ಬಗ್ಗೆ ಗೋವಾದ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಅವರೊಂದಿಗೆ ಮಾತುಕತೆ ನಡೆಸಿದ ದೇಶಪಾಂಡೆ, ‘ನಾಲ್ಕು ಚಕ್ರದ ವಾಹನಗಳು ಸೇರಿದಂತೆ ಲಘು ವಾಹನಗಳಲ್ಲಿ ಗೋವಾಕ್ಕೆ ಮೀನು ಸಾಗಣೆ ಮಾಡಲು ಯಾವುದೇ ಅಡೆತಡೆ ಇರುವುದಿಲ್ಲ. ಆದರೆ ಟ್ರಕ್ ಸೇರಿದಂತೆ ಭಾರೀ ವಾಹನಗಳಲ್ಲಿ ಗೋವಾ ರಾಜ್ಯಕ್ಕೆ ಮೀನು ಸಾಗಣೆ ಮಾಡಬೇಕಾದರೆ ಅನುಮತಿ/ಪ್ರಮಾಣ ಪತ್ರ ಕಡ್ಡಾಯವಾಗಿದೆ’ ಎಂದು ತಿಳಿಸಿದ್ದಾರೆ.

ಗೋವಾ ಸರಕಾರವು ಇತ್ತೀಚೆಗೆ 60 ಕಿ.ಮೀ. ಸುತ್ತಳತೆ ಪ್ರದೇಶದಿಂದ ತನ್ನಲ್ಲಿಗೆ ಮೀನು ಸಾಗಣೆಗೆ ಮುಕ್ತ ಅವಕಾಶ ನೀಡಿತ್ತು. ಇಂದಿನ ಮಾತುಕತೆಯಿಂದ ಸಣ್ಣ ಮತ್ತು ಮಧ್ಯಮ ಸ್ವರೂಪದ ಮೀನು ವ್ಯಾಪಾರೋದ್ಯಮಿಗಳಿಗೆ ಅನುಕೂಲವಾಗಿದೆ. ಆರೋಗ್ಯ ಸಚಿವ ರಾಣೆ ಅವರೊಂದಿಗೆ ನಡೆಸಿದ ಮಾತುಕತೆ ಯಶಸ್ವಿಯಾಗಿದೆ ಎಂದು ದೇಶಪಾಂಡೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News