×
Ad

ಪ್ರವಾಹ ಪೀಡಿತ ಎಂಟು ಜಿಲ್ಲೆಗಳ ರೈತರ ಖಾತೆಗಳಿಗೆ ಪರಿಹಾರ: ಆರ್.ವಿ.ದೇಶಪಾಂಡೆ

Update: 2018-12-17 19:53 IST

ಬೆಳಗಾವಿ, ಡಿ.17: ಪ್ರಸಕ್ತ ಸಾಲಿನ ಆಗಸ್ಟ್ ತಿಂಗಳಲ್ಲಿ ಉಂಟಾದ ಪ್ರವಾಹ ಹಾಗೂ ಭೂ-ಕುಸಿತದಿಂದ ಕೊಡಗು ಸೇರಿದಂತೆ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಉಂಟಾಗಿರುವ ತೋಟಗಾರಿಕೆ ಬೆಳೆಗಳ ನಷ್ಟ ಹಾಗೂ ಮೂಲಸೌಕರ್ಯ ಹಾನಿಗಳಿಗೆ 722.06 ಕೋಟಿ ರೂ. ಪರಿಹಾರ ಕೋರಿ ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದ ಬೇಡಿಕೆಯ ಪೈಕಿ 546.21 ಕೋಟಿ ರೂ. ಅನುದಾನ ಮಂಜೂರಾಗಿದೆ. ಈ ಮೊತ್ತದಲ್ಲಿ ರೈತರ ಖಾತೆಗಳಿಗೆ ಪರಿಹಾರ ಜಮಾ ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.

ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಕೆ.ಜಿ.ಬೋಪಯ್ಯ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೊಡಗು ಸೇರಿದಂತೆ ಪ್ರವಾಹ ಪೀಡಿತ ಎಂಟು ಜಿಲ್ಲೆಗಳಲ್ಲಿ ಹಾನಿಗಳಿಗಾಗಿ ರಾಷ್ಟ್ರೀಯ ಪ್ರಕೃತಿ ವಿಕೋಪ ನಿಧಿ (ಎನ್.ಡಿ.ಆರ್.ಎಫ್) ಯ ಮಾರ್ಗಸೂಚಿಗಳನ್ವಯ ಕೋರಲಾದ  ಪರಿಹಾರದ ಪ್ರಸ್ತಾವನೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರವು 546.21 ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ಈ ಮೊತ್ತವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪರಿಹಾರವನ್ನು ವಿತರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕೊಡಗು ಜಿಲ್ಲೆಗೆ ಸಂಬಂಧಿಸಿದ ತುರ್ತು ಕಾಮಗಾರಿಗಳಿಗೆ 25 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅಲ್ಲದೆ, ವಿವಿಧ ಇಲಾಖೆಗಳ ಮೂಲಕ ಮೂಲಸೌಕರ್ಯ ಕಾಮಗಾರಿಗಳ ಅನುಷ್ಠಾನಗೊಳಿಸಲು 85 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ದೇಶಪಾಂಡೆ ಹೇಳಿದರು.

ಕೊಡಗು ಜಿಲ್ಲೆಯಲ್ಲಿ ಸುಮಾರು 302 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅಂತೆಯೇ, ಈ ಕಾಮಗಾರಿಗಳನ್ನು ಕೈಗೊಳ್ಳಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999 ರ 4 (ಜಿ)  ವಿನಾಯತಿ ನೀಡಲಾಗಿದೆ. ಅಲ್ಲದೆ ಉತ್ತಮ ಗುಣಮಟ್ಟದ ಸೇವೆಯಲ್ಲಿ ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಸಂಗ್ರಹಣಾ ಪ್ರಾಧಿಕಾರವು ದೃಢಪಡಿಸಿಕೊಳ್ಳಲು ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿನ ಜಿಲ್ಲಾ ಮಟ್ಟದ ಸಮಿತಿಗಳಲ್ಲಿ ಸಂಬಂಧಪಟ್ಟ ಇಲಾಖೆಗಳ ಕ್ರಿಯಾಯೋಜನೆಗಳನ್ನು ಅನುಮೋದನೆ ಪಡೆದ ನಂತರ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ದೇಶಪಾಂಡೆ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News