×
Ad

ಕೆಜಿಎಫ್‍ನಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಚಿಂತನೆ: ಸಚಿವ ಕೆ.ಜೆ.ಜಾರ್ಜ್

Update: 2018-12-17 19:56 IST

ಬೆಳಗಾವಿ, ಡಿ.17: ಕೋಲಾರ ಜಿಲ್ಲೆಯ ಕೋಲಾರ್ ಗೋಲ್ಡ್ ಫೀಲ್ಡ್(ಕೆಜಿಎಫ್) ನ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್(ಬಿಜಿಎಂಎಲ್) ಸ್ಥಗಿತಗೊಂಡಿವುದರಿಂದ ಅಲ್ಲಿನ ನಿರುದ್ಯೋಗಿ ಕಾರ್ಮಿಕರಿಗೆ ಅನುಕೂಲ ಕಲ್ಪಿಸಲು ತುಮಕೂರು ಮಾದರಿಯಲ್ಲಿಯೇ ಕೆಜಿಎಫ್ ನಲ್ಲೂ ಕೈಗಾರಿಕಾ ಅವಕಾಶಗಳನ್ನು ಸೃಷ್ಟಿಸಲು ಉದ್ದೇಶಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.

ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯೆ ಎಂ.ರೂಪಕಲಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೆಜಿಎಫ್‍ನ ಸ್ಥಗಿತಗೊಂಡಿರುವ ಬಿಜಿಎಂಎಲ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರ ಶ್ರೇಯೋಭಿವೃದ್ಧಿ ಕೇಂದ್ರ ಸರಕಾರದ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ ಎಂದರು.

ಈ ಪ್ರದೇಶದಲ್ಲಿ ಉಪಯೋಗಿಸದೆಯೇ ಉಳಿದಿರುವ ಜಮೀನಿನಲ್ಲಿ ತುಮಕೂರು ನಗರದ ಸಮೀಪದಲ್ಲಿ ಕೇಂದ್ರ ಸರಕಾರದ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗಿರುವ ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಮಾದರಿಯಲ್ಲಿ ಕೆಜಿಎಫ್‍ನಲ್ಲೂ ಕೈಗಾರಿಕಾ ಕಾರಿಡಾರ್ ಸ್ಥಾಪಿಸಲು ಯೋಜಿಸಲಾಗಿದೆ ಎಂದು ಜಾರ್ಜ್ ತಿಳಿಸಿದರು.

ಇದಕ್ಕೆ ಸಂಬಂಧಿಸಿದಂತೆ 2018ರ ನ.13 ರಂದು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಕೈಗಾರಿಕಾ ಅಭಿವೃದ್ಧಿ ಆಯುಕ್ತರು ಹಾಗೂ ಕೋಲಾರ ಜಿಲ್ಲಾಧಿಕಾರಿಯವರಿಗೆ ನಾಲ್ಕು ತಿಂಗಳೊಳಗಾಗಿ ಕೈಗಾರಿಕಾ ಪ್ರದೇಶ ಸ್ಥಾಪಿಸುವ ಜಮೀನು ಗುರುತಿಸಿ ಮಾಹಿತಿ ನೀಡಲು ಸೂಚಿಸಲಾಗಿದೆ  ಎಂದು ಅವರು ವಿವರಿಸಿದರು.

2001ರಲ್ಲೇ ಬಿಜಿಎಂಎಲ್ ಕಾರ್ಖಾನೆ ಸ್ಥಗಿತಗೊಂಡಿದ್ದು, 2014ರಲ್ಲಿ ಲೀಸ್ ಅವಧಿ ಮುಕ್ತಾಯವಾಗಿದೆ. ಕೇಂದ್ರ ಸರಕಾರ 12 ಸಾವಿರ ಎಕರೆ ಜಮೀನನ್ನು ರಾಜ್ಯ ಸರಕಾರಕ್ಕೆ ಪೂರ್ಣ ಪ್ರಮಾಣದಲ್ಲಿ ನೀಡುವುದೇ ಆದರೆ 1600 ಕೋಟಿ ರೂ. ನೀಡಲು ರಾಜ್ಯ ಸರಕಾರ ಸಿದ್ದವಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಸದಸ್ಯೆ ರೂಪಕಲಾ ಮಾತನಾಡಿ, 30 ಸಾವಿರ ಕುಟುಂಬಗಳು ಇದರಿಂದಾಗಿ ಉದ್ಯೋಗ ಕಳೆದುಕೊಂಡಿವೆ. ರಾಷ್ಟ್ರಕ್ಕೆ 8 ಲಕ್ಷ ಕೆಜಿ ಬಂಗಾರವನ್ನು ಈ ಕಾರ್ಖಾನೆ ನೀಡಿದ್ದು, ಮಾನವೀಯ ದೃಷ್ಟಿಯಿಂದ ಈ ಕುಟುಂಬದ ಸದಸ್ಯರೊಬ್ಬರಿಗೆ ಪರ್ಯಾಯ ಉದ್ಯೋಗ ಒದಗಿಸಬೇಕೆಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News