ಮುರುಗೇಶ್ ನಿರಾಣಿ ಮಾಲಕತ್ವದ ಡಿಸ್ಟಿಲರಿ ಘಟಕದಲ್ಲಿ ಸ್ಫೋಟ ಪ್ರಕರಣ: ತನಿಖೆಗೆ ವಿಶೇಷ ತಂಡ ರಚನೆ

Update: 2018-12-17 14:43 GMT
ಫೈಲ್ ಚಿತ್ರ

ಬಾಗಲಕೋಟೆ, ಡಿ. 17: ಮುಧೋಳದ ನಿರಾಣಿ ಶುಗರ್ಸ್‌ನ ಡಿಸ್ಟಿಲರಿ ಘಟಕದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದ ತನಿಖೆಗೆ ಬೆಳಗಾವಿಯ ಬಾಯ್ಲರ್ ಘಟಕಗಳ ಉಪ ನಿರ್ದೇಶಕ ರಮೇಶ ರಾಥೋಡ ನೇತೃತ್ವದಲ್ಲಿ ವಿಶೇಷ ತಂಡವನ್ನು ನೇಮಿಸಿದ್ದು, 24 ಗಂಟೆಗಳಲ್ಲಿ ವರದಿ ನೀಡಲು ಸೂಚನೆ ನೀಡಲಾಗಿದೆ.

ರಮೇಶ್ ರಾಥೋಡ್ ನೇತೃತ್ವದ ಅಧಿಕಾರಿಗಳ ತಂಡದಲ್ಲಿ ಜಮಖಂಡಿ ಡಿವೈಎಸ್‌ಪಿ, ಕಾರ್ಮಿಕ ಇಲಾಖೆ ಸಹಾಯಕ ಆಯುಕ್ತರು ಹಾಗೂ ಕಾರ್ಖಾನೆಗಳ ವಿಭಾಗದ ಸಹಾಯಕ ನಿರ್ದೇಶಕರು ಇದ್ದಾರೆ. ಕಾರ್ಖಾನೆ ಹಾಗೂ ಬಾಯ್ಲರ್‌ಗಳ ಇಲಾಖೆ ನಿರ್ದೇಶಕ ಜಿ.ಬಿ.ರಾಜಗೋಪಾಲ್ ತನಿಖೆ ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ಗೊತ್ತಾಗಿದೆ.

ಮಿಥೇನ್ ಅನಿಲದೊಂದಿಗೆ ಆಮ್ಲಜನಕ ಸಂಪರ್ಕದಿಂದ ಸ್ಫೋಟ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯೊಂದರಿಂದ ಬೆಳಕಿಗೆ ಬಂದಿದ್ದು, ತನಿಖೆ ಪೂರ್ಣಗೊಂಡ ಬಳಿಕ ಸ್ಫೋಟಕ್ಕೆ ನಿಖರವಾದ ಕಾರಣ ಗೊತ್ತಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಚಿವರ ಭೇಟಿ, ಪರಿಶೀಲನೆ: ಸ್ಫೋಟ ಸಂಭವಿಸಿದ ಸ್ಥಳಕ್ಕೆ ಕಾರ್ಮಿಕ ಸಚಿವ ವೆಂಕಟರಮಣಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತರ ಕುಟುಂಬಕ್ಕೆ ಸಚಿವ ಶಿವಾನಂದ ಪಾಟೀಲ್ ವೈಯಕ್ತಿಕವಾಗಿ ತಲಾ 2.50 ಲಕ್ಷ ರೂ.ಪರಿಹಾರ ಘೋಷಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಸಚಿವ ವೆಂಕಟರಮಣಪ್ಪ, ಮೃತರ ಕುಟುಂಬಕ್ಕೆ ರಾಜ್ಯ ಸರಕಾರ ತಲಾ 5ಲಕ್ಷ ರೂ.ಪರಿಹಾರ ನೀಡಲಿದ್ದು, ಜೀವ ವಿಮೆ ಮೂಲಕ ತಲಾ 8ಲಕ್ಷ ರೂ.ವರೆಗೂ ಪರಿಹಾರ ದೊರೆಯಲಿದೆ. ಈಗಾಗಲೇ ಕಾರ್ಖಾನೆ ಮಾಲಕ ಮುರುಗೇಶ್ ನಿರಾಣಿ ಘೋಷಿಸಿರುವ ತಲಾ 5 ಲಕ್ಷ ರೂ. ಪರಿಹಾರದ ಮೊತ್ತದ ಜೊತೆ ಇನ್ನೂ 5ಲಕ್ಷ ರೂ.ನೀಡಲು ಸೂಚನೆ ನೀಡಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News