×
Ad

ವಿಧಾನಸಭೆ: ಆರಾಧನಾ ಯೋಜನೆಯಡಿ ಅನುದಾನ ಹೆಚ್ಚಳಕ್ಕೆ ಸದಸ್ಯರ ಒಕ್ಕೊರಲ ಆಗ್ರಹ

Update: 2018-12-17 21:10 IST

ಬೆಳಗಾವಿ, ಡಿ.17: ರಾಜ್ಯ ಸರಕಾರವು ಆರಾಧನಾ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿನ ದೇವಾಲಯಗಳ ಅಭಿವೃದ್ಧಿಗೆ ಬಿಡುಗಡೆ ಮಾಡುತ್ತಿರುವ ಅನುದಾನವನ್ನು ಹೆಚ್ಚಿಸಬೇಕು ಎಂದು ಪಕ್ಷಾತೀತವಾಗಿ ಸದಸ್ಯರು ಆಗ್ರಹಿಸಿದರು.

ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಎಚ್.ಕೆ.ಕುಮಾರಸ್ವಾಮಿ ಪ್ರಶ್ನೆ ಕೇಳಿದಾಗ ಮುಜುರಾಯಿ ಸಚಿವ ರಾಜಶೇಖರ್ ಪಾಟೀಲ್ ನೀಡಿದ ಉತ್ತರಕ್ಕೆ ತೃಪ್ತರಾಗದ ಸದಸ್ಯರು, ಆರಾಧನಾ ಯೋಜನೆಯಡಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಿಡುಗಡೆ ಮಾಡುತ್ತಿರುವುದರಿಂದ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತಿದೆ ಎಂದರು.

ಕಳೆದ ಮೂರು ವರ್ಷಗಳಲ್ಲಿ ಆರಾಧನಾ ಯೋಜನೆಯಡಿ ಬಜೆಟ್‍ನಲ್ಲಿ 3.97 ಕೋಟಿ ರೂ.ಗಳ ಅನುದಾನವನ್ನು ನಿಗದಿಪಡಿಸಿದ್ದು, ಸರಕಾರದಿಂದ 3.96 ಕೋಟಿ ರೂ.ಗಳ ಅನುದಾನವನ್ನು ಸಮಾನ ಕಂತುಗಳಲ್ಲಿ ಜಿಲ್ಲಾಧಿಕಾರಿಗೆ ಬಿಡುಗಡೆ ಮಾಡಲಾಗಿದೆ. ಈ ಪೈಕಿ 3.82 ಕೋಟಿ ರೂ.ಗಳು ಖರ್ಚಾಗಿದೆ ಎಂದು ರಾಜಶೇಖರ್ ಪಾಟೀಲ್ ಹೇಳಿದರು.

ಗ್ರಾಮೀಣ ಪ್ರದೇಶದ ದೇವಸ್ಥಾನಗಳನ್ನು ಅಭಿವೃದ್ಧಿಪಡಿಸಲು ಅನುದಾನ ಕೋರಿ ಬೇಡಿಕೆ ಬಂದಿದೆ. ಈ ಯೋಜನೆಗೆ ಬಜೆಟ್‍ನಲ್ಲಿ ಒದಗಿಸಿರುವ ಅನುದಾನದ ಲಭ್ಯತೆಗನುಗುಣವಾಗಿ ಬೇಡಿಕೆಗಳನ್ನು ಪರಿಶೀಲಿಸಿ ಅನುದಾನ ಬಿಡುಗಡೆಗೆ ಕ್ರಮವಹಿಸಲಾಗುತ್ತಿದೆ. ಆರಾಧನಾ, ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿಯಲ್ಲಿ ಬಜೆಟ್‍ನಲ್ಲಿ ಒದಗಿಸಿದ ಅನುದಾನವನ್ನು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಸಮಾನವಾಗಿ ಹಂಚಿಕೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ದೇವಸ್ಥಾನಗಳಿಗೆ ನೀಡುತ್ತಿರುವ ಅನುದಾನ ತುಂಬಾ ಕಡಿಮೆಯಿದೆ. ಜನಸಂಖ್ಯೆಗೆ ಅನುಗುಣವಾಗಿ ಅನುದಾನ ನಿಗದಿ ಮಾಡಬೇಕು. ಅನ್ಯ ಧರ್ಮದ ಧಾರ್ಮಿಕ ಸ್ಥಳಗಳಿಗೆ ಇಲ್ಲದ ಕಡಿವಾಣ ಹಿಂದೂ ದೇವಸ್ಥಾನಗಳಿಗೆ ಏಕೆ ಎಂದು ಬಿಜೆಪಿ ಸದಸ್ಯ ಪ್ರಶ್ನಿಸುತ್ತಿದ್ದಂತೆ ಕೆರಳಿದ ಸ್ಪೀಕರ್, ಈ ಸದನದಲ್ಲಿ ಧರ್ಮಾಧಾರಿತ ರಾಜಕಾರಣ ಮಾಡಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಕುಮಾರಸ್ವಾಮಿ ಕೇಳಿರುವ ಪ್ರಶ್ನೆಗೂ ನೀವು ಪ್ರಸ್ತಾಪ ಮಾಡಲು ಹೊರಟಿರುವ ವಿಷಯಕ್ಕೂ ಸಂಬಂಧವಿಲ್ಲ. ನಿಮಗೆ ಧಾರ್ಮಿಕ ವಿಚಾರವನ್ನು ಚರ್ಚೆ ಮಾಡಬೇಕಾದರೆ ಬೇರೆ ರೂಪದಲ್ಲಿ ಚರ್ಚೆ ಮಾಡಿ. ಧಾರ್ಮಿಕ ರಾಜಕಾರಣಕ್ಕೆ ಸಂಬಂಧಪಟ್ಟಂತೆ ಮಾತನಾಡುವ ಯಾವ ಮಾತುಗಳೂ ಕಡತಕ್ಕೆ ಹೋಗಬಾರದು ಎಂದು ಅವರು ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಶಾಸಕರು ಸಿ.ಟಿ.ರವಿ ಅವರ ಬೆಂಬಲಕ್ಕೆ ನಿಂತರೆ ಆಡಳಿತ ಪಕ್ಷದ ಶಾಸಕರು ಸ್ಪೀಕರ್ ಅವರ ಪರವಾಗಿ ನಿಂತರು. ಇದರಿಂದ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ಅಗ ಮಧ್ಯ ಪ್ರವೇಶಿಸಿದ ಯಡಿಯೂರಪ್ಪ, ದೇವಸ್ಥಾನಗಳಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂಬ ಭೇದಭಾವ ಇಲ್ಲ. ದೇವಸ್ಥಾನಕ್ಕೆ ತಕ್ಕಂತೆ ಅನುದಾನ ನೀಡಿ ಎಂಬುದಷ್ಟೆ ನಮ್ಮ ಶಾಸಕರ ಬೇಡಿಕೆ ಎಂದರು.

ಅದಕ್ಕೆ ಸಹಮತ ವ್ಯಕ್ತಪಡಿಸಿದ ಸ್ಪೀಕರ್, ಹೆಚ್ಚು ಅನುದಾನ ಕೇಳುವುದಕ್ಕೆ ನನ್ನ ಅಭ್ಯಂತರವಿಲ್ಲ. ಆದರೆ, ಅದರ ಹೆಸರಿನಲ್ಲಿ ರಾಜಕಾರಣ ಮಾಡಲು ಬಿಡುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News