ಸರಕಾರಿ ಭೂಮಿಗೆ 982 ಕೋಟಿ ರೂ.ಮೌಲ್ಯ ನಿಗದಿ: ಸಚಿವ ಆರ್.ವಿ.ದೇಶಪಾಂಡೆ

Update: 2018-12-17 16:04 GMT

ಬೆಳಗಾವಿ, ಡಿ.17: ರಾಮನಗರ ಜಿಲ್ಲೆಯ ಬಿಡದಿ ತಾಲೂಕಿನ ಶ್ಯಾನಮಂಗಲ, ಬಿಲ್ಲಕೆಂಪನಹಳ್ಳಿ ಮತ್ತು ಬಾಣಂದೂರು ಗ್ರಾಮಗಳಲ್ಲಿ ಚಾಮುಂಡೇಶ್ವರಿ ಬ್ಯುಲ್ಡ್ ಟೆಕ್ ಪ್ರೈ.ಲಿ. ಈಗಲ್‍ಟನ್ ಪ್ರಾಜೆಕ್ಟ್ ಗಾಗಿ 106 ಎಕರೆ 12 ಗುಂಟೆ ವಿಸ್ತೀರ್ಣದ ಜಮೀನನ್ನು ಒತ್ತುವರಿ ಮಾಡಿಕೊಂಡಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.

ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಎ.ಟಿ.ರಾಮಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸುಪ್ರೀಂಕೋರ್ಟ್ 2014ರ ಜನವರಿ 16ರಂದು ನೀಡಿರುವ ಆದೇಶದಂತೆ ಒತ್ತುವರಿ ಮಾಡಿಕೊಂಡಿರುವ ಜಮೀನಿನ ಪೈಕಿ 28 ಎಕರೆ 33 ಗುಂಟೆ ಸರಕಾರಿ ಜಮೀನನ್ನು ವಶಕ್ಕೆ ಪಡೆಯಲಾಗಿದೆ ಹಾಗೂ 77 ಎಕರೆ 19 ಗುಂಟೆ ಒತ್ತುವರಿ ಜಮೀನು ಸಂಸ್ಥೆಯ ವಶದಲ್ಲಿದೆ ಎಂದರು.

ಸಂಸ್ಥೆಯವರಿಗೆ ಒಂದು ಅವಕಾಶ ನೀಡಲು ಸುಪ್ರೀಂಕೋರ್ಟ್ ಸೂಚಿಸಿದ್ದ ಹಿನ್ನೆಲೆಯಲ್ಲಿ ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಿ, ಪರಾಮರ್ಶಿಸಿ ಸಂಸ್ಥೆಯ ವಶದಲ್ಲಿರುವ 77 ಎಕರೆ 19 ಗುಂಟೆ ಜಮೀನಿಗೆ ಒಟ್ಟು 982,07,77,480 ರೂ.ಗಳ ಮೌಲ್ಯವನ್ನು ನಿಗದಿಪಡಿಸಲಾಗಿದೆ. ಸುಪ್ರೀಂಕೋರ್ಟ್ ಆದೇಶದಂತೆ ರಾಮನಗರ ಜಿಲ್ಲಾಧಿಕಾರಿ ಮೂಲಕ ಸಂಸ್ಥೆಯವರಿಗೆ ಹಣ ಪಾವತಿಸಿ ಇಲ್ಲವೇ, ಭೂಮಿಯನ್ನು ಸರಕಾರ ವಶಕ್ಕೆ ಪಡೆದುಕೊಳ್ಳಲಿದೆ ಎಂದು ನೋಟಿಸ್ ಜಾರಿ ಮಾಡಲಾಗಿದೆ ಎಂದು ಅವರು ಹೇಳಿದರು.

ಸರಕಾರದ ನೋಟಿಸ್ ಪ್ರಶ್ನಿಸಿ ಸಂಸ್ಥೆಯವರು ಹೈಕೋರ್ಟ್ ಮೋರೆ ಹೋಗಿದ್ದಾರೆ. ರಾಜ್ಯ ಸರಕಾರವು ಈ ವಿಚಾರದಲ್ಲಿ ಯಾವುದೇ ವಿಳಂಬ ಧೋರಣೆ ಅನುಸರಿಸಿಲ್ಲ. ಸುಪ್ರೀಂಕೋರ್ಟ್‍ನ ಆದೇಶದ ಪ್ರಕಾರ ಸಂಪುಟ ಉಪಸಮಿತಿ ರಚಿಸಲಾಗಿದ್ದು, ಆ ಸಮಿತಿ ಒತ್ತುವರಿ ಭೂಮಿಗೆ ಪಾವತಿಸಬೇಕಾದ ಮೌಲ್ಯವನ್ನು ನಿಗದಿಪಡಿಸಿತ್ತು ಎಂದು ಅವರು ತಿಳಿಸಿದರು.

ಇದಕ್ಕೂ ಮೊದಲು ವಿಷಯ ಪ್ರಸ್ತಾಪಿಸಿದ ರಾಮಸ್ವಾಮಿ, ಸುಪ್ರೀಂಕೋರ್ಟ್‍ನ ಅಂತಿಮ ಆದೇಶವಾಗಿ ಐದು ವರ್ಷ ಕಳೆದರೂ ಒತ್ತುವರಿಯಾದ ಜಮೀನನ್ನು ಏಕೆ ವಶಕ್ಕೆ ಪಡೆದಿಲ್ಲ. ಇದಕ್ಕಿರುವ ಅಡ್ಡಿ ಆತಂಕವಾದರೂ ಏನು, ವಿಳಂಬದ ಹಿಂದೆ ಯಾವ ಶಕ್ತಿ ಇದೆ. ರೈತರು, ಬಡವರ ವಿಚಾರವಾಗಿದ್ದರೆ ಸರಕಾರ ಈ ರೀತಿ ಕೈ ಕಟ್ಟಿ ಕುಳಿತುಕೊಳ್ಳುತ್ತಿತ್ತೆ ಎಂದು ತರಾಟೆಗೆ ತೆಗೆದುಕೊಂಡರು.

ಎ.ಟಿ.ರಾಮಸ್ವಾಮಿ ವಾದಕ್ಕೆ ಬಿಜೆಪಿ ಸದಸ್ಯರಾದ ಅರಗಜ್ಞಾನೇಂದ್ರ, ಸಿ.ಟಿ.ರವಿ, ಬಸವರಾಜಬೊಮ್ಮಾಯಿ, ಕೆ.ಜಿ.ಬೋಪಯ್ಯ, ಸುರೇಶ್ ಕುಮಾರ್ ಸೇರಿದಂತೆ ಇನ್ನಿತತರು ದನಿಗೂಡಿಸಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಸ್ಪೀಕರ್ ರಮೇಶ್‍ ಕುಮಾರ್, ಕವಿ ಇಕ್ಬಾಲ್ ಹೇಳುವಂತೆ ಧೂಳು ನಮ್ಮ ಮುಖದ ಮೇಲಿದೆ. ನಾವು ಕನ್ನಡಿಯನ್ನು ಒರೆಸುತ್ತಿದ್ದೇವೆ(ಧೂಲ್ ಚೆಹರೇ ಪರ್ ಥೀ ಔರ್ ಹಮ್ ಅಯಿನಾ ಸಾಫ್ ಕರ್ ರಹೇತೆ) ಎನ್ನುವಂತಾಗಿದೆ ಎಂದು ಮಾರ್ಮಿಕವಾಗಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News