ಬೇಡಿಕೆ, ಅನುದಾನ ಲಭ್ಯತೆ ಆಧರಿಸಿ ಹೊಸ ವಿದ್ಯಾರ್ಥಿ ನಿಲಯ ಮಂಜೂರು: ಸಚಿವ ಪುಟ್ಟರಂಗಶೆಟ್ಟಿ
ಬೆಳಗಾವಿ, ಡಿ.17: ಹೊಸ ವಿದ್ಯಾರ್ಥಿ ನಿಲಯ ಮಂಜೂರಾತಿಗೆ ಸರಕಾರವು ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ರಾಜ್ಯದ ಒಟ್ಟಾರೆ ಬೇಡಿಕೆ ಮತ್ತು ಅನುದಾನ ಲಭ್ಯತೆ ಆಧರಿಸಿ ವಿದ್ಯಾರ್ಥಿ ನಿಲಯಗಳನ್ನು ಮಂಜೂರು ಮಾಡಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ. ಪುಟ್ಟರಂಗಶೆಟ್ಟಿ ಹೇಳಿದರು.
ಸೋಮವಾರ ವಿಧಾನ ಪರಿಷತ್‍ನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಅರುಣ್ ಶಹಾಪೂರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿ ಒಟ್ಟು 2438 ವಿದ್ಯಾರ್ಥಿ ನಿಲಯಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ 1300 ಮೆಟ್ರಿಕ್ ಪೂರ್ವ ಮತ್ತು 1138 ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿವೆ ಎಂದರು.
ಅಲ್ಲದೆ, 1308 ವಿದ್ಯಾರ್ಥಿ ನಿಲಯಗಳು ಸ್ವಂತ ಕಟ್ಟಡಗಳಲ್ಲಿ, 74 ವಿದ್ಯಾರ್ಥಿ ನಿಲಯಗಳು ಉಚಿತ ಕಟ್ಟಡಗಳಲ್ಲಿ ಹಾಗೂ 1056 ವಿದ್ಯಾರ್ಥಿನಿಲಯಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ 246 ಹೊಸ ವಿದ್ಯಾರ್ಥಿ ನಿಲಯಗಳ ಮಂಜೂರಾತಿಗೆ ಅರ್ಜಿಗಳು ಸ್ವೀಕೃತವಾಗಿವೆ. ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ತಿಳಗೋಳ ಗ್ರಾಮದಲ್ಲಿ ಮೆಟ್ರಿಕ್ ಪೂರ್ವ ವಸತಿನಿಲಯವನ್ನು ಪ್ರಾರಂಭಿಸಲು ಹೊಸ ಮಾರ್ಗಸೂಚಿಗಳನ್ವಯ ಪರಿಶೀಲನೆ ನಡೆಸಿ ಪ್ರಸ್ತಾವನೆ ಸಲ್ಲಿಸುವಂತೆ ಅಲ್ಲಿನ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಬಿಂಜಲಭಾವಿ ಗ್ರಾಮದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯವನ್ನು ಈ ಹಿಂದೆ ತಿಳಗೋಳ ಗ್ರಾಮಕ್ಕೆ ವರ್ಗಾವಣೆ ಮಾಡಲಾಗಿತ್ತು. ಪುನಃ ಈ ಆದೇಶ ಮಾರ್ಪಾಡಿಸಿ ಬಿಂಜಲಭಾವಿ ಗ್ರಾಮದಲ್ಲಿಯೇ ವಸತಿ ನಿಲಯವನ್ನು ಮುಂದುವರೆಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸರಕಾರಿ ವಸತಿ ನಿಲಯಗಳ ಸ್ಥಿತಿಗತಿ ಸುಧಾರಣೆಗೆ ಒತ್ತು ನೀಡಬೇಕು ಎಂದು ಸದಸ್ಯರು ಒತ್ತಾಯಿಸಿದಾಗ ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ನಿವೃತ್ತ ಅಪರ ಮುಖ್ಯಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಸಮಿತಿ ಈ ಕುರಿತು ಅಧ್ಯಯನ ನಡೆಸುತ್ತಿದೆ. ಡಿ.18 ರಂದು ಸಮಿತಿ ಸಭೆ ನಡೆಯಲಿದೆ. ಪ್ರತಿಪಕ್ಷಗಳ ಸದಸ್ಯರೂ ಕೂಡಾ ಸಭೆಗೆ ಆಗಮಿಸಿ ಸಲಹೆ ನೀಡಬಹುದು ಎಂದರು.