ಪ್ರತ್ಯೇಕ ಅಡಿಕೆ ಮಂಡಳಿ ರಚನೆಗೆ ಕ್ರಮ: ಸಚಿವ ಎಂ.ಸಿ. ಮನಗೂಳಿ
ಬೆಳಗಾವಿ, ಡಿ.17: ಅಡಿಕೆ ಬೆಳೆಯ ಮೇಲೆ ಅವಲಂಬಿತರಾಗಿರುವ ಸಣ್ಣ, ಅತಿಸಣ್ಣ ರೈತರ ಕ್ಷೇಮಾಭಿವೃದ್ಧಿಗೆ ಪ್ರತ್ಯೇಕ ಅಡಿಕೆ ಮಂಡಳಿ ಅವಶ್ಯಕವಾಗಿದೆ. ತೋಟಗಾರಿಕೆ ಇಲಾಖೆ ಮತ್ತು ವಿಶ್ವವಿದ್ಯಾಲಯ ನೀಡಿದ ವರದಿಯ ಸಾಧಕ ಬಾಧಕಗಳನ್ನು ಪರಾಮರ್ಶಿಸಿ ಮಂಡಳಿ ರಚನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ತಿಳಿಸಿದರು.
ಸೋಮವಾರ ವಿಧಾನಪರಿಷತ್‍ನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಐವನ್ ಡಿಸೋಜಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಡಿಕೆ ಬೆಳೆಯಲ್ಲಿ ಮೌಲ್ಯವರ್ಧನೆ, ಉತ್ಪನ್ನ, ವೈವಿಧ್ಯೀಕರಣ ಹಾಗೂ ಅಡಿಕೆಯ ಪರ್ಯಾಯ ಬಳಕೆಗೆ ಸಂಬಂಧಿಸಿದಂತೆ ಸಂಶೋಧನೆಗೆ ಒತ್ತು ನೀಡಲಾಗುವುದು ಎಂದರು.
ರೈತರು ಎದುರಿಸುತ್ತಿರುವ ಕಾನೂನಾತ್ಮಕ ಸಮಸ್ಯೆಗಳು, ರೋಗ ಮತ್ತು ಕೀಟ ನಿರ್ವಹಣೆಗೆ ಕ್ರಮ ಕೈಗೊಳ್ಳುವುದು. ಅಡಿಕೆಗೆ ಉದ್ಯಮದ ಸ್ಥಾನಮಾನ ಒದಗಿಸಿ ರಫ್ತು ಮೂಲಕ ವಿದೇಶಿ ವಿನಿಮಯ ಮಾರುಕಟ್ಟೆ ಕಲ್ಪಿಸಿ ಬೆಲೆ ಸ್ಥಿರೀಕರಣಗೊಳಿಸಲು ಅಡಿಕೆ ಮಂಡಳಿ ರಚನೆ ಅವಶ್ಯ ಎಂದು ಅಭಿಪ್ರಾಯಪಡಲಾಗಿದೆ. ಮಂಡಳಿ ರಚನೆಗೆ ಕೇಂದ್ರ ಸರಕಾರದಿಂದ ಅನುದಾನ ನೀಡಲಾಗುತ್ತಿಲ್ಲ ಎಂದು ಅವರು ತಿಳಿಸಿದರು.