ಟೊಯೋಟಾ ಕಿರ್ಲೋಸ್ಕರ್ ಸರಕಾರಕ್ಕೆ 3733 ಕೋಟಿ ರೂ. ತೆರಿಗೆ ಪಾವತಿಸಬೇಕಿದೆ: ಸಚಿವ ಜಾರ್ಜ್

Update: 2018-12-17 16:57 GMT

ಬೆಳಗಾವಿ, ಡಿ.17: ಬಿಡದಿ ಬಳಿ ಇರುವ ಟೊಯೋಟಾ ಕಿರ್ಲೋಸ್ಕರ್ ಕಾರ್ಖಾನೆ ಕರ್ನಾಟಕ ಸರ್ಕಾರಕ್ಕೆ ಮುಂದಿನ ಆರು ತಿಂಗಳ ನಂತರ 3733 ಕೋಟಿ ರೂ. ತೆರಿಗೆಯನ್ನು ಪಾವತಿಸಬೇಕಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.

ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಎಂ.ಚಂದ್ರಪ್ಪ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಿರ್ಲೋಸ್ಕರ್ ಸಂಸ್ಥೆ 1999 ಡಿ.24 ಮತ್ತು 2010 ಡಿ.21 ಈ ಎರಡು ಹಂತಗಳಲ್ಲಿ ಕಾರ್ಖಾನೆಗಳನ್ನು ಆರಂಭಿಸಿದೆ. ಫಾರ್ಚುನರ್ ಮತ್ತು ಇನ್ನೋವಾದಂತಹ ಉತ್ಪನ್ನಗಳನ್ನು ತಯಾರು ಮಾಡುತ್ತಿದ್ದು, ಕಾರ್ಖಾನೆ ಉತ್ತಮವಾಗಿ ನಡೆಯುತ್ತಿದೆ ಎಂದರು.

ಮೊದಲ ಹಂತದ ತೆರಿಗೆ ವಿನಾಯಿತಿ ಕಾಲಮಿತಿ ಇನ್ನು ಆರು ತಿಂಗಳಲ್ಲಿ ಮುಕ್ತಾಯಗೊಳ್ಳಲಿದ್ದು, ಸಂಸ್ಥೆ 3733 ಕೋಟಿ ರೂ.ವನ್ನು ಪಾವತಿಸಬೇಕಿದೆ.  ಎರಡನೇ ಹಂತದಲ್ಲಿ 989 ಕೋಟಿ ರೂ. ಪಾವತಿಸಬೇಕಿತ್ತು. ಅದಕ್ಕೆ ಇನ್ನೂ 10 ವರ್ಷ ಕಾಲಾವಕಾಶವಿದೆ ಎಂದು ಅವರು ಹೇಳಿದರು.

ಕಾರ್ಖಾನೆಯಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶ ನೀಡಲಾಗಿದೆ. ಗ್ರೂಪ್ 'ಎ' ನಲ್ಲಿ ಶೇ.71ರಷ್ಟು, ಗ್ರೂಪ್ 'ಬಿ' ಯಲ್ಲಿ ಶೇ.86, ಗ್ರೂಪ್ 'ಸಿ' ಯಲ್ಲಿ ಶೇ.99ರಷ್ಟು ಗ್ರೂಪ್ 'ಡಿ' ಯಲ್ಲಿ ಶೇ.100ರಷ್ಟು ಉದ್ಯೋಗ ಅವಕಾಶಗಳನ್ನು ಕಲ್ಪಿಸಲಾಗಿದೆ ಎಂದು ಜಾರ್ಜ್ ವಿವರಿಸಿದರು.

1998ರಲ್ಲಿ ಪ್ರಾರಂಭವಾದ ಟಯೋಟಾ ಕಿರ್ಲೋಸ್ಕರ್ ಕಾರ್ಖಾನೆ 20 ವರ್ಷ ಪೂರ್ಣಗೊಳಿಸಿದೆ. ಆ ಸಂದರ್ಭದಲ್ಲಿ ಒಪ್ಪಂದ ಮಾಡಿಕೊಳ್ಳುವಾಗ ಕಾರ್ಖಾನೆಯವರು ಪ್ರತಿ ವರ್ಷ ಮೂರುಸಾವಿರ ಡಾಲರ್ ಹೊಸದಾಗಿ ಬಂಡವಾಳ ಹೂಡಿಕೆ ಮಾಡಿ ಜಪಾನ್ ತಂತ್ರಜ್ಞಾನ ತಂದು ಇಲ್ಲಿ ಹೊಸ ಹೊಸ ಉತ್ಪಾದನೆಗಳನ್ನು ತಯಾರಿಸುವುದಾಗಿ ಭರವಸೆ ನೀಡಿದ್ದರು ಎಂದು ಚಂದ್ರಪ್ಪ ಹೇಳಿದರು.

ರಾಜ್ಯ ಸರಕಾರ 2 ಸಾವಿರ ಎಕರೆ ವರೆಗಿನ ಭೂಮಿ ಮತ್ತು 18 ವರ್ಷದ ವರೆಗೆ ತೆರಿಗೆ ಪಾವತಿಗೆ ಕಾಲಮಿತಿ ವಿನಾಯಿತಿ ನೀಡಿದೆ. ಈಗ 18 ವರ್ಷ ತುಂಬಿದೆ. ಸರಕಾರಕ್ಕೆ ಅವರು ಎಷ್ಟು ಕೋಟಿ ತೆರಿಗೆ ಕೊಡಬೇಕೆಂದು ಚಂದ್ರಪ್ಪ ಪ್ರಶ್ನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News