ಶಿವಮೊಗ್ಗ: ಹೋರಿ ಬೆದರಿಸುವ ಸ್ಪರ್ಧೆಯ ವೇಳೆ ಸಜ್ಜಾ ಕುಸಿತ; ಹಲವರಿಗೆ ಗಾಯ
Update: 2018-12-17 22:52 IST
ಶಿವಮೊಗ್ಗ, ಡಿ.17: ಮನೆಯೊಂದರ ಸಜ್ಜಾ ಕುಸಿದು ಬಿದ್ದ ಪರಿಣಾಮ ಹೋರಿ ಬೆದರಿಸುವ ಸ್ಪರ್ಧೆ ವೀಕ್ಷಿಸುತ್ತಿದ್ದ ಸುಮಾರು 15 ಜನ ಗಾಯಗೊಂಡ ಘಟನೆ ಜಿಲ್ಲೆಯ ಸೊರಬ ತಾಲೂಕಿನ ಕುಪ್ಪಗಡ್ಡೆ ಗ್ರಾಮದಲ್ಲಿ ನಡೆದಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಸಾವಿರಾರು ಜನರು ಸ್ಪರ್ಧೆ ವೀಕ್ಷಿಸಲು ಆಗಮಿಸಿದ್ದರು. ಕುಂಬ್ರುಸಾಬ್ ಎಂಬವರ ಮಹಡಿ ಮನೆಯ ಸಜ್ಜಾದ ಮೇಲೆ ಹಲವರು ನಿಂತುಕೊಂಡು ಸ್ಪರ್ಧೆ ವೀಕ್ಷಿಸುತ್ತಿದ್ದರು.
ಆದರೆ ಜನರ ಭಾರಕ್ಕೆ ಸಜ್ಜಾ ಕುಸಿದು ಬಿದ್ದಿದೆ. ಇದರಿಂದ ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.