×
Ad

ಶಿವಮೊಗ್ಗ: ಕೇಬಲ್ ಕಾಯ್ದೆ ವಿರೋಧಿಸಿ ಆಪರೇಟರ್ ಗಳಿಂದ ಪ್ರತಿಭಟನಾ ರ‍್ಯಾಲಿ

Update: 2018-12-17 22:58 IST

ಶಿವಮೊಗ್ಗ, ಡಿ. 17: ಕೇಬಲ್ ವ್ಯವಹಾರ ನಿಯಂತ್ರಿಸುವ ಕಾಯ್ದೆಯನ್ನು ಡಿ.29 ರಿಂದ ಜಾರಿಗೊಳಿಸಲು ಮುಂದಾಗಿರುವ ಟ್ರಾಯ್ ನಿರ್ಧಾರ ವಿರೋಧಿಸಿ ಸೋಮವಾರ ಶಿವಮೊಗ್ಗ ಕೇಬಲ್ ಟಿ.ವಿ. ಆಪರೇಟರ್ಸ್ ಅಸೋಸಿಯೇಷನ್ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿತು. ನಂತರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ಟ್ರಾಯ್ ಮುಖ್ಯಸ್ಥರಿಗೆ ಮನವಿ ಪತ್ರ ಅರ್ಪಿಸಿತು.

ಕಳೆದ ಸರಿಸುಮಾರು 25 ವರ್ಷಗಳಿಂದ ಕೇಬಲ್ ಆಪರೇಟಿಂಗ್ ವೃತ್ತಿ ನಡೆಸಿಕೊಂಡು ಬರುತ್ತಿದ್ದು, ಪ್ರತ್ಯೇಕ - ಪರೋಕ್ಷವಾಗಿ ಸಾವಿರಾರು ಜನ ಈ ವೃತ್ತಿ ಮೂಲಕ ಜೀವನ ಕಂಡುಕೊಂಡಿದ್ದಾರೆ. ಸರ್ಕಾರದ ಸೂಚನೆಗಳನ್ನು ಪಾಲಿಸಿ, ಗ್ರಾಹಕರಿಗೆ ಉತ್ತಮ ಸೇವೆ ನೀಡಿಕೊಂಡು ಬರುತ್ತಿದ್ದೇವೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

29-12-2018 ರಿಂದ ಕೇಬಲ್ ವ್ಯವಹಾರ ನಿಯಂತ್ರಿಸುವ ಕಾಯ್ದೆಯನ್ನು ಕೇಂದ್ರದ ಅಂಗಸಂಸ್ಥೆಯಾದ ಟ್ರಾಯ್ ಜಾರಿಗೆ ತರಲು ನಿರ್ಧರಿಸಿದೆ. ಪ್ರತಿಯೊಂದು ಚಾನಲ್‍ನ ವೀಕ್ಷಣೆಗೆ ಎಂ.ಆರ್.ಪಿ. ದರ ಪಾವತಿಸಿ, ಗ್ರಾಹಕರು ವೀಕ್ಷಣೆ ಮಾಡಬೇಕು. ಕನಿಷ್ಠ 154 ರೂ.ಗಳಿಗೆ 100 ಫ್ರೀ ಟೂ ಏರ್ ಚಾನಲ್‍ಗಳನ್ನು ಕಡ್ಡಾಯವಾಗಿ ಪ್ರಸಾರ ಮಾಡಬೇಕು ಎಂದು ಸೂಚಿಸಿದೆ.

ಕೆಲ ಖಾಸಗಿ ಟಿ.ವಿ. ಚಾನಲ್‍ಗಳ ಜಾಹೀರಾತಿನಲ್ಲಿ ಕೇವಲ ತಮ್ಮ ಚಾನಲ್‍ಗಳ ದರದ ಬಗ್ಗೆ ಮಾತ್ರ ಮಾಹಿತಿ ನೀಡುತ್ತಿದ್ದಾರೆ. ಕನಿಷ್ಠ ದರ ಹಾಗೂ ತೆರಿಗೆಯ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಈ ಮೂಲಕ ಕೇಬಲ್ ಗ್ರಾಹಕರಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಟಿ.ವಿ. ಜಾಹೀರಾತುಗಳಿಂದ ಗ್ರಾಹಕರು ಮತ್ತು ಕೇಬಲ್ ಆಪರೇಟರ್ ಗಳ ನಡುವೆಯೇ ವೈಮನಸ್ಸು ಉಂಟಾಗುವಂತಾಗಿದೆ. ಈ ಕಾರಣದಿಂದ ಟಿ.ವಿ.ಯಲ್ಲಿ ಪ್ರಸಾರವಾಗುತ್ತಿರುವ ಜಾಹೀರಾತುಗಳಲ್ಲಿ ಪೂರ್ಣ ಪ್ರಮಾಣದ ವಿವರ ನೀಡುವಂತೆ ಸೂಚಿಸಬೇಕು. ಹಾಗೆಯೇ ಟ್ರಾಯ್ ಜಾರಿಗೆ ತರುತ್ತಿರುವ ಹೊಸ ನಿಯಮದ ಬಗ್ಗೆ ಗ್ರಾಹಕರಿಗೆ ಕೂಲಂಕಷ ಮಾಹಿತಿ ನೀಡುವ ಕಾರ್ಯ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಗ್ರಾಹಕರಿಗೆ ಹಾಗೂ ಕೇಬಲ್ ವ್ಯವಹಾರ ನಡೆಸುತ್ತಿರುವವರಿಗೆ ಹೊರೆಯಾಗದಂತೆ ಕಾಯ್ದೆ ರೂಪಿಸಬೇಕಾಗಿದೆ. ಈ ಕಾರಣದಿಂದ ಟ್ರಾಯ್ ಹೊಸ ನಿಯಮ ಜಾರಿಗೆ ಮುಂದಾಗಬಾರದು. ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಪ್ರತಿಭಟನೆಯಲ್ಲಿ ಸಂಘದ ಪ್ರಮುಖರಾದ ರಾಜಶೇಖರ್, ಈರಣ್ಣ, ವಿನಯ್ ಸೇರಿದಂತೆ ನೂರಾರು ಕೇಬಲ್ ಆಪರೇಟರ್ ಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News