×
Ad

ರಾಜಕಾರಣದಲ್ಲಿ ಮಹಿಳೆಯರು ಮೂಲೆಗುಂಪು: ಮಾಜಿ ಸಚಿವೆ ಮೋಟಮ್ಮ

Update: 2018-12-17 23:14 IST

ಮಂಡ್ಯ, ಡಿ.17: ರಾಜಕಾರಣದಲ್ಲಿ ಮಹಿಳೆಯರನ್ನು ಮೂಲೆಗುಂಪು ಮಾಡಲಾಗಿದೆ. ಹಣಬಲ, ತೋಳ್ಬಲ, ಸಂಘಟನಾ ಶಕ್ತಿ ಹೊಂದಿರುವ ಪುರುಷರು ರಾಜಕೀಯ ಕ್ಷೇತ್ರದಲ್ಲಿ ಅಧಿಪತ್ಯ ಸಾಧಿಸಿರುವುದರ ಜತೆಗೆ ಮಹಿಳೆಯರನ್ನು ನಿಯಂತ್ರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವೆ ಮೋಟಮ್ಮ ವಿಷಾದಿಸಿದ್ದಾರೆ.

ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹೊರಾವಣ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ ಕರ್ನಾಟಕ ಸಂಘದ ಸಹಯೋಗದಲ್ಲಿ ಸೋಮವಾರ ನಡೆದ ಸಮಾನತೆ, ಸ್ವಾತಂತ್ರ್ಯ ಮತ್ತು ಹಕ್ಕುಗಳು: ಮಹಿಳಾ ನೆಲೆಯಲ್ಲಿ ಜಿಲ್ಲಾಮಟ್ಟದ ಕಾರ್ಯಾಗಾರ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಅವರು ಮಾತನಾಡಿದರು.

ಕೆಲವು ಸ್ತ್ರೀಶಕ್ತಿ ಸಂಘಗಳನ್ನು ಚುನಾವಣೆಯಗಳಲ್ಲಿ ಹಣ ಹಂಚಿಕೆ ಮಾಡಿಲು ಬಳಸಿಕೊಳ್ಳಲಾಗುತ್ತಿದೆ. ಕೆಲ ಮಹಿಳೆಯರು ಸಂಘದಿಂದ ಸಂಘಕ್ಕೆ ಜಿಗಿಯುತ್ತ ಸಾಲ ಸೌಲಭ್ಯಕ್ಕಾಗಿ ಮಾತ್ರ ಸಂಘಗಳನ್ನು ಆಶ್ರಯಿಸಿದ್ದಾರೆ. ಚುನಾವಣೆ ವೇಳೆ ರಾಜಕೀಯ ನಿರ್ಣಯಗಳನ್ನು ಕೈಗೊಳ್ಳದೆ, ರಾಜಕಾರಣಿಗಳ ಬಳಿ ಸಂಪನ್ಮೂಲ ಕ್ರೋಢೀಕರಣ ಮಾಡಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು. 

ಸಮರ್ಥ ಸಮಾಜ ಕಟ್ಟುವ ಸದುದ್ದೇಶದಿಂದ ಮಹಿಳೆಯರು ಬದಲಾವಣೆ ಹೊಂದಬೇಕು. ಚುನಾವಣಾ ಸ್ಪರ್ಧೆ ಮತ್ತು ಮತ ಚಲಾವಣೆ ಮಾಡಲು ಸ್ವತಂತ್ರ ತೀರ್ಮಾನ ಕೈಗೊಂಡು ಗೆಲುವು ಸಾಧಿಸಿ ಪುರುಷರಂತೆ 'ಹಳೆಕಲ್ಲಿಗೆ ಹೊಸ ಬಿಲ್ಲು' ಬರೆಯಲು ಮುಂದಾಗದೆ ಲಾಭದಾಯಕ ರಾಜಕಾರಣವನ್ನು ಮಟ್ಟಹಾಕಬೇಕು ಎಂದು ಅವರು ಸಲಹೆ ನೀಡಿದರು.

ವಿದ್ಯಾರ್ಥಿಗಳು ಪ್ರಚಲಿತ ವಿದ್ಯಮಾನಗಳ ಕುರಿತು ಅಧ್ಯಯನ ಮಾಡುವ ಮೂಲಕ ರಾಜಕೀಯ ತಿಳುವಳಿಕೆಯನ್ನು ಬೆಳೆಸಿಕೊಳ್ಳಬೇಕು. ಪೋಷಕರಿಂದ ಪಡೆಯುವ ದಿನದ ಖರ್ಚಿನ ಹಣದ ಒಂದು ಭಾಗವನ್ನು ಸ್ನೇಹಿತರೊಂದಿಗೆ ಉಳಿತಾಯ ಮಾಡಿ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಇತರೆ ಸಹಪಾಠಿಗಳಿಗೆ ನೀಡಿಬೇಕು ಎಂದು ಅವರು ಕಿವಿಮಾತು ಹೇಳಿದರು.

ಮಾಜಿ ಶಾಸಕಿ ಮಲ್ಲಾಜಮ್ಮ ಮಾತನಾಡಿ, ಪ್ರಭಾವಿ ಪುರುಷ ಕುಟುಂಬಗಳ ಮಹಿಳಾ ಮಣಿಗಳಿಗೆ ಮತ್ತು ಹಣವಂತರಿಗಷ್ಟೇ ರಾಜಕೀಯ ಪ್ರಾತಿನಿಧ್ಯ ದೊರೆಯುತ್ತಿದೆ. ಆರ್ಥಿಕ ಸ್ವಾತಂತ್ರ್ಯ ಕಳೆದುಕೊಂಡ ಮಹಿಳೆಯರು ಮೀಸಲಾತಿ ಇದ್ದರೂ ಸಹ ಚುನಾವಣೆಯಲ್ಲಿ ಸ್ಪರ್ಧಿಸಲು ಧೈರ್ಯ ಮಾಡುತ್ತಿಲ್ಲ ಎಂದು  ಬೇಸರ ವ್ಯಕ್ತಪಡಿಸಿದರು.

ಪತ್ರಕರ್ತೆ ಡಾ.ಎನ್.ಗಾಯಿತ್ರಿ, ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳ ಮಾನಸ ಹಾಗೂ ಎಐಡಿವೈಓ ಸಂಘಟನೆಯ ಉಮಾದೇವಿ ವಿಷಯ ಮಂಡನೆ ಮಾಡಿದರು.

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕಾರ್ಯಕ್ರಮ ಸಂಯೋಜಕಿ ಡಾ.ಎಚ್.ಎಂ.ಹೇಮಲತ, ಮಹಿಳಾ ಅಧ್ಯಯನ ವಿಭಾಗದ ಅಧ್ಯಾಪಕರಾದ ಶರ್ಮಿಳಾ, ಡಾ.ರೇಣುಕಾ ಮಂದ್ರೂಪ, ಕರ್ನಾಟಕ ಸಂಘ ಮಹಿಳಾ ಘಟಕದ ಸಂಚಾಲಕಿ ನಾಗರೇವಕ್ಕ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News