ಕಳಸ: ಹಾಕಿದ್ದ ಡಾಂಬಾರು ತೆಗೆದು ಮರುಡಾಂಬರೀಕರಣ ಮಾಡಿಸಿದ ನಾಗರಿಕರು

Update: 2018-12-17 18:14 GMT

ಕಳಸ, ಡಿ.17: ಪಟ್ಟಣದ ಮಂಜಿನಕಟ್ಟೆ ಸಮೀಪದ ರಸ್ತೆಯಲ್ಲಿ ಉಂಟಾಗಿದ್ದ ಭಾರೀ ಹೊಂಡ ಗುಂಡಿಗಳನ್ನು ಲೋಕೋಪಯೋಗಿ ಇಲಾಖೆ ವತಿಯಿಂದ ಮುಚ್ಚುತ್ತಿದ್ದ ವೇಳೆ ಕಳಪೆ ಕಾಮಗಾರಿಯನ್ನು ಕಂಡ ಗ್ರಾಮಸ್ಥರು ಕಾಮಗಾರಿ ತಡೆದು ಹೊಸ ಕಾಮಗಾರಿಯನ್ನು ನಡೆಸಿದ ಘಟನೆ ನಡೆಯಿತು.

ಕಳೆದ ವರ್ಷ ಇದೇ ರಸ್ತೆಗೆ ಡಾಂಬರೀಕರಣವನ್ನು ಮಾಡಲಾಗಿತ್ತು. ಆ ಸಂದರ್ಭದಲ್ಲೂ ಕಳಪೆ ಕಾಮಗಾರಿಯನ್ನು ಪ್ರಶ್ನಿಸಿದ್ದ ಗ್ರಾಮಸ್ತರು ಹಾಕಿರುವ ಡಾಂಬಾರನ್ನು ಕೀಳಿಸಿ ಹೊಸ ಡಾಂಬಾರೀಕರಣ ಮಾಡಿಸಿದ್ದರು. ಆದರೂ ಕೇವಲ ಎರಡೇ ತಿಂಗಳಿನಲ್ಲಿ ಮಂಜಿನಕಟ್ಟೆ ಸಮೀಪ ದೊಡ್ಡದಾದ ಹೊಂಡ ನಿರ್ಮಾಣವಾಗಿ ಇಲಾಖೆ ವತಿಯಿಂದ ನಡೆದ ಕಳಪೆ ಕಾಮಗಾರಿ ಬಹಿರಂಗಗೊಂಡಿತ್ತು. ಈ ವೇಳೆ ಗ್ರಾಮಸ್ಥರು ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಹೊಂಡವನ್ನು ಮುಚ್ಚಿ ಮಳೆಗಾಲ ಕಳೆದ ಕೂಡಲೇ ಡಾಂಬಾರು ಹಾಕಿ ಮುಚ್ಚಿ ಕೊಡುವ ಭರವಸೆಯನ್ನು ಇಲಾಖಾಧಿಕಾರಿಗಳು ಹಾಗೂ ಗುತ್ತಿಗೆದಾರರು ನೀಡಿದ್ದರು.

ಅದರಂತೆ ಕಾಮಗಾರಿಯ ನಿರ್ವಹಣೆಗೆ ಸೋಮವಾರ ಬೆಳಗ್ಗೆಯೇ ಕಾರ್ಮಿಕರು ಬಂದು ತರಾತುರಿಯಲ್ಲಿ ಹೊಂಡಕ್ಕೆ ಜಲ್ಲಿ ಕಲ್ಲಿನ ಪುಡಿ ಸುರಿದು, ಮೇಲ್ಬಾಗಕ್ಕೆ ಡಾಂಬಾರು ಹಾಕಿ ಹೋಗುವ ಹಂತದಲ್ಲಿದ್ದರು. ಕೂಡಲೇ ಪಟ್ಟಣದ ನಾಗರಿಕರು ಗುಂಪುಗೂಡಿ ಕಳಪೆ ಕಾಮಗಾರಿಯ ಬಗ್ಗೆ ಪ್ರಶ್ನಿಸಿದರು. ಕ್ರಮಬದ್ಧವಾಗಿ ಡಾಂಬರೀಕರಣ ಮಾಡಬೇಕು, ಇಲ್ಲವಾದರೆ ಕೆಲಸವನ್ನು ಕೆಲಸ ಮಾಡಲು ಬಿಡುವುದಿಲ್ಲ, ಮನಬಂದಂತೆ ಕೆಲಸ ಮಾಡುವುದಾದರೇ ಕಾಮಗಾರಿ ಮಾಡಲೇ ಬೇಡಿ, ಮಾಡಿರುವ ಕೆಲಸ ಕೆಲ ದಿನಗಳಾದರೂ  ಬಾಳಿಕೆ ಬರಬೇಕು ಎಂದು ಕಾಮಗಾರಿಗೆ ಬಂದಿರುವ ವಾಹನಗಳನ್ನು ತಡೆಹಿಡಿದರು. ಆದರೆ ಈ ಸಂದರ್ಭದಲ್ಲಿ ಸಂಬಂಧಿಸಿದ ಇಂಜಿನಿಯರಾಗಲೀ, ಗುತ್ತಿಗೆದಾರರಾಗಲೀ ಸ್ಥಳಕ್ಕೆ ಬಾರದ ಕಾರಣ, ಸ್ಥಳದಲ್ಲಿದ್ದ ಕಾರ್ಮಿಕರು, ನಮಗೆ ಕಾಮಗಾರಿ ಮಾಡಲು ಸೂಚಿಸಿದ್ದಾರೆಂದು ಹೇಳಿದಾಗ ಪಟ್ಟು ಬಿಡದ ನಾಗರಿಕರು, ಕಳಪೆ ಕೆಲಸ ಮಾಡಿದ್ದನ್ನು ಕಿತ್ತು ಕ್ರಮಬದ್ಧವಾಗಿ ಗುಂಡಿ ಮುಚ್ಚಿಸಿ ಡಾಂಬಾರು ಹಾಕುವವರೆಗೂ ಸ್ಥಳ ಬಿಟ್ಟು ಕದಲದೇ ಮರು ಡಾಂಬಾರೀಕರಣ ಮಾಡಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರಕಾಶ್ ಕುಮಾರ್, ಸದಸ್ಯರಾದ ರಾಮಮೂರ್ತಿ, ಭಾಸ್ಕರ್, ಪಟ್ಟಣದ ನಾಗರಿಕರಾದ ಜಯಂತ್ ತೆಂಡೂಲ್ಕರ್, ಅಂಬರೀಶ್ ಭಟ್, ಟಿಟ್ಟು ತೋಮಸ್, ಯೊಗೀಶ್ ಭಟ್, ವೀರೇಂದ್ರ, ಜಗದೀಶ್ ಭಟ್, ಶೇಖರ ಶೆಟ್ಟಿ, ಅಬ್ಬಕ್ಕ, ಮಹೇಶ್ ಇತರರು ಸ್ಥಳದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News