ಸಾವಿನಂಚಿನಲ್ಲಿರುವ ಮಗುವನ್ನು ಕೊನೆಯ ಬಾರಿ ನೋಡಲು ತಾಯಿಗೆ ಅಡ್ಡಿಯಾದ ಟ್ರಂಪ್ ನಿಯಮ

Update: 2018-12-18 11:23 GMT

ಓಕ್ ಲ್ಯಾಂಡ್, ಡಿ.18: ಡೊನಾಲ್ಡ್ ಟ್ರಂಪ್ ಆಡಳಿತವು 8 ಮುಸ್ಲಿಂ ರಾಷ್ಟ್ರಗಳ ನಾಗರಿಕರಿಗೆ ಅಮೆರಿಕಾ ಪ್ರವೇಶಿಸಲು ಹೇರಿರುವ ನಿರ್ಬಂಧದಿಂದಾಗಿ ಯೆಮನಿ ಪೌರತ್ವ ಹೊಂದಿದ ಮಹಿಳೆಯೊಬ್ಬರು ತಮ್ಮ ಅಸೌಖ್ಯಪೀಡಿತ ಹಾಗೂ ಸಾವಿನಂಚಿನಲ್ಲಿರುವ ಎರಡು ವರ್ಷದ ಪುತ್ರನನ್ನು ಕೊನೆಯ ಬಾರಿಗೆ ನೋಡುವ ಅವಕಾಶದಿಂದ ವಂಚಿತರಾಗುವ ಭಯವನ್ನು ಎದುರಿಸುತ್ತಿದ್ದಾರೆ. ಈಜಿಪ್ಟ್ ರಾಜಧಾನಿ ಕೈರೋ ನಿವಾಸಿಯಾಗಿರುವ ಶೈಮಾ ಸ್ವಿಲೇಹ್ ಎಂಬ ಮಹಿಳೆಯ 2 ವರ್ಷದ ಪುತ್ರ ಅಬ್ದುಲ್ಲಾ ಓಕ್ ಲ್ಯಾಂಡ್ ನ ಯುಸಿಎಸ್‍ಎಫ್ ಬೆನಿಯೊಫ್ ಮಕ್ಕಳ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದು, ಮಗುವನ್ನು ಕೃತಕ ಉಸಿರಾಟ ವ್ಯವಸ್ಥೆಯಲ್ಲಿಡಲಾಗಿದೆ. ಅನುವಂಶೀಯ ಮೆದುಳಿನ ಸಮಸ್ಯೆಯೊಂದರಿಂದ ನರಳುತ್ತಿರುವ ಅಬ್ದುಲ್ಲಾ ಆರೋಗ್ಯ ದಿನೇ ದಿನೇ ಹದಗೆಡುತ್ತಿದ್ದು, ಮಗುವಿನ ಪುಟ್ಟ ಜೀವ ಕೃತಕ ಉಸಿರಾಟ ವ್ಯವಸ್ಥೆಯನ್ನು ಹೆಚ್ಚು ದಿನ ತಾಳಿಕೊಳ್ಳದು ಎಂದು ವೈದ್ಯರು ಹೇಳುತ್ತಿದ್ದಾರೆ. “ನನ್ನ ಪತ್ನಿ ಪ್ರತಿ ದಿನ ಕರೆ ಮಾಡಿ ನಮ್ಮ ಪುತ್ರನಿಗೆ ಒಂದು ಮುತ್ತನ್ನು ನೀಡಿ ಕೊನೆಯ ಬಾರಿ ಆತನನ್ನು ಒಮ್ಮೆ ಎತ್ತಿಕೊಳ್ಳಬೇಕೆಂದು ಹೇಳುತ್ತಿದ್ದಾಳೆ'' ಎಂದು ಮಗುವಿನ ತಂದೆ ಅಲಿ ಹಸನ್ ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಹೇಳುವಾಗ ಅವರ ದುಃಖದ ಕಟ್ಟೆಯೊಡೆದಿತ್ತು. “ಸಮಯ ಮೀರುತ್ತಿದೆ, ಒಮ್ಮೆಯಾದರೂ ನಮ್ಮ ಕುಟುಂಬವನ್ನು ಜೊತೆಯಾಗಿಸಿ” ಎಂದು ಆತ ಕಳಕಳಿಯ ಮೊರೆಯಿಟ್ಟಿದ್ದಾರೆ. ಕುಟುಂಬ ಅಬ್ದುಲ್ಲಾನ ಎರಡನೇ ಹುಟ್ಟುಹಬ್ಬವನ್ನು ಇತ್ತೀಚೆಗಷ್ಟೇ ಆಚರಿಸಿತ್ತು. ಅಮೆರಿಕಾ ನಾಗರಿಕರಾಗಿರುವ ಹಸನ್ ಸ್ಟಾಕ್ಟನ್ ನಗರದ ನಿವಾಸಿಯಾಗಿದ್ದು ಅಮೆರಿಕಾ ಪೌರತ್ವ ಹೊಂದಿರುವ ಅಬ್ದುಲ್ಲಾನನ್ನು ಓಕ್ ಲ್ಯಾಂಡ್ ಗೆ ಚಿಕಿತ್ಸೆಗಾಗಿ ಕರೆತಂದಿದ್ದರು. ಆದರೆ ಯೆಮೆನಿ ಪೌರತ್ವ ಹೊಂದಿದ್ದ ಹಸನ್ ಪತ್ನಿಗೆ ಅಮೆರಿಕಾ ಪ್ರವೇಶಿಸುವುದು ಅಲ್ಲಿನ ನಿಷೇಧದಿಂದ ಸಾಧ್ಯವಾಗಿಲ್ಲ. ಅಬ್ದುಲ್ಲಾ ತಾಯಿಗೆ ಅಮೆರಿಕಾ ಪ್ರವೇಶಿಸಲು ಅವಕಾಶವೊದಗಿಸುವಂತೆ ಕುಟುಂಬ ವಿನಂತಿಸಿದ್ದರೂ ಅಮೆರಿಕಾ ಅಧಿಕಾರಿಗಳಿಂದ ಇನ್ನಷ್ಟೇ ಪ್ರತಿಕ್ರಿಯೆ ದೊರಕಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News