ಉ.ಕ ಪ್ರತ್ಯೇಕ ರಾಜ್ಯ ಘೋಷಣೆಗೆ ಆಗ್ರಹಿಸಿ ಧ್ವಜಾರೋಹಣಕ್ಕೆ ಯತ್ನ: ಹಲವರ ಬಂಧನ, ಬಿಡುಗಡೆ

Update: 2018-12-18 14:36 GMT
ಸುವರ್ಣ ವಿಧಾನಸೌಧ

ಬೆಳಗಾವಿ, ಡಿ. 18: ‘ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಘೋಷಣೆ’ ಮಾಡಬೇಕೆಂದು ಆಗ್ರಹಿಸಿ ಪ್ರತ್ಯೇಕ ಧ್ವಜಾರೋಹಣಕ್ಕೆ ಯತ್ನಿಸಿದ ಉತ್ತರ ಕರ್ನಾಟಕ ಹೋರಾಟ ಸಮಿತಿಯ 10ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿ, ಜಾಮೀನಿನ  ಬಿಡುಗಡೆಗೊಳಿಸಿದ್ದಾರೆ.

ಮಂಗಳವಾರ ಇಲ್ಲಿನ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿನ ಸುವರ್ಣ ಗಾರ್ಡನ್‌ನಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಘೋಷಣೆ ಮಾಡಬೇಕೆಂದು ಒತ್ತಾಯಿಸಿ ಪ್ರತ್ಯೇಕ ಧ್ವಜಾರೋಹಣ ಮಾಡಲು ಮುಂದಾಗಿದ್ದರು. ಕೂಡಲೇ ಮಧ್ಯೆ ಪ್ರವೇಶಿಸಿದ ಪೊಲೀಸರು ಧ್ವಜವನ್ನು ಕಸಿದುಕೊಂಡಿದ್ದಾರೆಂದು ಗೊತ್ತಾಗಿದೆ.

ಉತ್ತರ ಕರ್ನಾಟಕ ಭಾಗದ 13 ಜಿಲ್ಲೆಗಳ ನಕ್ಷೆ ಒಳಗೊಂಡ ಧ್ವಜ ಸಿದ್ಧಪಡಿಸಿದ್ದೇವೆ. ಆದರೆ, ಅದನ್ನು ಕಸಿದುಕೊಂಡು ಪೊಲೀಸರು ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಅಡಿವೇಶ ಇಟಗಿ ಆರೋಪಿಸಿದ್ದಾರೆ.

ಆ ಬಳಿಕ ಹೋರಾಟ ಸಮಿತಿ ಮುಖಂಡರ ನಿಯೋಗವನ್ನು ಸುವರ್ಣ ವಿಧಾನಸೌಧಕ್ಕೆ ಕರೆದೊಯ್ದ ಪೊಲೀಸರು, ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿಸಿದ್ದಾರೆ. ಈ ವೇಳೆ ಸಿಎಂ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News