ಪಂಜಾಬ್ ಸ್ವಾತಂತ್ರ್ಯಕ್ಕಾಗಿ ಪಾಕ್ ಸೇನೆಗೆ ಸಿಖ್ ಸಂಘಟನೆ ಮೊರೆ: ಅಮರಿಂದರ್ ಸಿಂಗ್ ಆರೋಪ

Update: 2018-12-18 14:53 GMT

ಚಂಡೀಗಡ,ಡಿ.18: ಖಾಲಿಸ್ತಾನ ಪರ ಸಂಘಟನೆಯು ಭಾರತದಿಂದ ಪಂಜಾಬನ್ನು ಸ್ವತಂತ್ರಗೊಳಿಸಲು ಪಾಕಿಸ್ತಾನದ ಬೆಂಬಲವನ್ನು ಕೋರಿರುವುದು ಅದಕ್ಕೆ ಪಾಕ್ ಸೇನೆ ಮತ್ತು ಐಎಸ್‌ಐ ಜೊತೆಗಿನ ಸಂಬಂಧವನ್ನು ಬಹಿರಂಗಪಡಿಸಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮಂಗಳವಾರ ಆರೋಪಿಸಿದ್ದಾರೆ.

ಅಮೆರಿಕ ಮೂಲದ ಸಿಖ್ಸ್ ಫೋರ್ ಜಸ್ಟಿಸ್ (ಎಸ್‌ಎಫ್‌ಜೆ) ಎಂಬ ಪ್ರತ್ಯೇಕತವಾದಿ ಸಂಘಟನೆ ಭಾರತದಿಂದ ಪಂಜಾಬನ್ನು ಸ್ವತಂತ್ರಗೊಳಿಸುವ ಉದ್ದೇಶದಿಂದ ನಡೆಸುವ ಜನಾದೇಶ 2020 ಅಭಿಯಾನವನ್ನು ಬೆಂಬಲಿಸುವಂತೆ ಪಾಕಿಸ್ತಾನ ಸರಕಾರವನ್ನು ಮನವಿ ಮಾಡಿದೆ ಎಂಬ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಸಿಂಗ್ ಈ ಆರೋಪವನ್ನು ಮಾಡಿದ್ದಾರೆ. ಎಸ್‌ಎಫ್‌ಜೆಯ ಕಾನೂನು ಸಲಹೆಗಾರ ಗುರುಪತ್ವಂತ್ ಸಿಂಗ್ ಪನ್ನುನ್‌ರನ್ನು ಉದ್ದೇಶಿಸಿ ಹೇಳಿಕೆ ನೀಡಿರುವ ಸಿಂಗ್, ರಹಸ್ಯ ಈಗ ಬಯಲಾಗಿದೆ, ಎಸ್‌ಎಫ್‌ಜೆ ಮತ್ತು ಪಾಕಿಸ್ತಾನ ಸೇನೆಯ ನಡುವಿನ ಸಂಬಂಧ ಈಗ ಬಹಿರಂಗಗೊಂಡಿದೆ ಎಂದು ತಿಳಿಸಿದ್ದಾರೆ.

ಸಿಖ್ ಧರ್ಮ ಸ್ಥಾಪಕ ಗುರು ನಾನಕ್ ದೇವ್ ಅವರ ಜನ್ಮದಿನಾಚರಣೆಯ ಸಂದರ್ಭದಲ್ಲೇ ಎಸ್‌ಎಫ್‌ಜೆ ಕತರ್ಪುರ್ ಸಾಹಿಬ್ ಸಮ್ಮೇಳನ 2019ನ್ನು ಆಯೋಜಿಸಿರುವ ವಿರುದ್ಧವೂ ಅಮರಿಂದರ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆಯು ಪಂಜಾಬ್‌ನಲ್ಲಿ ಉಗ್ರವಾದವನ್ನು ಮತ್ತೆ ಸೃಷ್ಟಿಸಲು ಶತಾಯಗತಾಯವಾಗಿ ಪ್ರಯತ್ನಿಸುತ್ತಿರುವ ಪಾಕಿಸ್ತಾನ ಸೇನೆಯ ಷಡ್ಯಂತ್ರದ ದೊಡ್ಡ ಭಾಗವಾಗಿದೆ ಎಂದು ಸಿಂಗ್ ಆರೋಪಿಸಿದ್ದಾರೆ.

80-90ರ ದಶಕದಲ್ಲಿ ಪಾಕ್ ಪ್ರೇರಿತ ಉಗ್ರವಾದ ಪಂಜಾಬ್‌ನಲ್ಲಿ ಪಾರಮ್ಯ ಮೆರೆದಿರಬಹುದು. ಆದರೆ ಈಗ ರಾಜ್ಯವು ಅಂಥ ಯಾವುದೇ ಪ್ರಯತ್ನಗಳನ್ನು ತಡೆಯಲು ಎಲ್ಲ ರೀತಿಯಲ್ಲೂ ಸಮರ್ಥವಾಗಿದೆ ಎಂದು ಹೇಳುವ ಮೂಲಕ ಸಿಂಗ್ ಪಾಕಿಸ್ತಾನಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News