ತುರ್ತು ಸಂದರ್ಭಗಳಲ್ಲಿ ನೇರವಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅವಕಾಶ: ಸಚಿವ ಶಿವಾನಂದ ಪಾಟೀಲ್
ಬೆಳಗಾವಿ, ಡಿ.18: ರಾಜ್ಯ ಸರ್ಕಾರದ ಆರೋಗ್ಯ ಕರ್ನಾಟಕ ಮತ್ತು ಭಾರತ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಗಳನ್ನು ಜಂಟಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಎಸ್.ಪಾಟೀಲ್ ಅವರು ಮೇಲ್ಮನೆಯಲ್ಲಿ ಇಂದು ಹೇಳಿದರು.
ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಪಿ.ಆರ್.ರಮೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಯಶಸ್ವಿನಿ, ವಾಜಪೇಯಿ ಆರೋಗ್ಯ ಶ್ರೀ, ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆ, ರಾಜೀವ್ ಆರೋಗ್ಯ ಭಾಗ್ಯ, ಇಂದಿರಾ ಸುರಕ್ಷಾ, ರಾಷ್ಟ್ರೀಯ ಸ್ವಾಸ್ಥ್ಯಬಿಮಾ ಯೋಜನೆ ಸೇರಿದಂತೆ ವಿವಿಧ ಯೋಜನೆಗಳನ್ನು ವಿಲೀನಗೊಳಿಸಿ ಆರೋಗ್ಯ ಕರ್ನಾಟಕ ಯೋಜನೆಯನ್ನು ಕಳೆದ ಮಾರ್ಚ್ 1 ರಿಂದ ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಯಡಿ ಪ್ರಾಥಮಿಕ, ಸಾಮಾನ್ಯ ದ್ವಿತೀಯ, ಕ್ಲಿಷ್ಟಕರ ದ್ವಿತೀಯ, ತೃತೀಯ ಮತ್ತು ತುರ್ತು ಖಾಯಿಲೆಗಳಿಗೆ ಚಿಕಿತ್ಸೆ ಒದಗಿಸಲಾಗುತ್ತಿದೆ. ಈ ಯೋಜನೆಯಡಿ ವಿವಿಧ 1600 ಪ್ರಕಾರಗಳ ಚಿಕಿತ್ಸೆಗಳನ್ನು ಪಡೆಯಬಹುದು.
ಮೊದಲು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಅಲ್ಲಿಂದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಶಿಫಾರಸ್ಸು ಪತ್ರ ಪಡೆಯಬೇಕು ಎಂಬುದು ಸಾಮಾನ್ಯ ತಿಳುವಳಿಕೆಯಾಗಿದೆ. ಹೃದಯಾಘಾತ, ರಸ್ತೆ ಅಪಘಾತ ಮತ್ತಿತರ ತುರ್ತು ಸಂದರ್ಭಗಳಲ್ಲಿ ಸಮೀಪದ ಖಾಸಗಿ ಆಸ್ಪತ್ರೆಗಳಲ್ಲಿ ನೇರವಾಗಿ ದಾಖಲಾಗಿ ಚಿಕಿತ್ಸೆ ಪಡೆದು ನಂತರ ಘಟನೋತ್ತರವಾಗಿ ಸರ್ಕಾರಿ ವೈದ್ಯಾಧಿಕಾರಿಗಳಿಂದ ಶಿಫಾರಸ್ಸು ಪತ್ರ ಪಡೆಯುವ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ತಿಳಿಸಿದರು.