ಎಸ್.ಪಿ.ವಿ ಸಂಸ್ಥೆಯ ನಿರಾಸಕ್ತಿಯಿಂದಾಗಿ ಜವಳಿ ಪಾರ್ಕ್ ಸ್ಥಾಪನೆ ವಿಳಂಬ: ಸಿಎಂ ಕುಮಾರಸ್ವಾಮಿ

Update: 2018-12-18 16:41 GMT

ಬೆಳಗಾವಿ, ಡಿ.18: ಕಲಬುರ್ಗಿ ಜವಳಿ ಪಾರ್ಕ್ ಸ್ಥಾಪನೆಗೆ ಎಸ್.ಪಿ.ವಿ ಸಂಸ್ಥೆಯ ನಿರಾಸಕ್ತಿಯೇ ಕಾರಣ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಬಸವರಾಜ ಮತ್ತಿಮುಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಸರಕಾರದ “ಸ್ಕೀಮ್ ಫಾರ್ ಇಂಟಿಗ್ರೆಟೆಡ್ ಟೆಕ್ಸ್‍ಟೈಲ್ ಪಾರ್ಕ್” ಯೋಜನೆಯಡಿ ಗುಲ್ಬರ್ಗಾ ಟೆಕ್ಸ್ ಟೈಲ್ ಪಾರ್ಕ್ ಕಲಬುರ್ಗಿ ಎಂಬ ಎಸ್.ಪಿ.ವಿ ಸಂಸ್ಥೆಯ ಮೂಲಕ ನಂದೂರು ಕೆಸರಟಗಿ ಕೈಗಾರಿಕಾ ಪ್ರದೇಶ 50 ಎಕರೆ ಜಮೀನಿನಲ್ಲಿ ಜವಳಿ ಪಾರ್ಕ್ ಸ್ಥಾಪಿಸಲು ಅನುಮೋದನೆ ನೀಡಲಾಗಿದೆ. ಆದರೆ, ಎಸ್.ಪಿ.ವಿ ಸಂಸ್ಥೆ ತನ್ನ ವಂತಿಗೆಯನ್ನು ಪಾವತಿಸಲು ನಿರಾಸಕ್ತಿ ತೋರಿರುವ ಕಾರಣ ಈ ಜವಳಿ ಪಾರ್ಕ್ ಸ್ಥಾಪನೆ ವಿಳಂಬವಾಗಿದೆ ಎಂದರು.

ಯೋಜನೆಯ ಮಾರ್ಗಸೂಚಿಯಂತೆ ಜವಳಿ ಪಾರ್ಕ್ ಸ್ಥಾಪನೆಗೆ ಕೇಂದ್ರ ಸರ್ಕಾರದಿಂದ ಶೇಕಡಾ 40ರಷ್ಟು ಅನುದಾನದಂತೆ 18.5 ಕೋಟಿ ರೂ. ಅನುದಾನ ಪಡೆಯಬಹುದಾಗಿದೆ. ಈವರೆಗೆ 1.85 ಕೋಟಿ ರೂ. ಅನುದಾನವನ್ನು ಎಸ್.ಪಿ.ವಿ ಸಂಸ್ಥೆಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಪೂರ್ಣ ಅನದಾನವನ್ನು ಎಸ್.ಪಿ.ವಿ ಸಂಸ್ಥೆಗೆ ನೀಡಲಾಗಿದ್ದು, ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕಾಗಿ ವೆಚ್ಚ ಭರಿಸಲಾಗಿದೆ ಎಂದು ಅವರು ಹೇಳಿದರು.

ಯೋಜನಾ ವೆಚ್ಚದಲ್ಲಿ 25.03 ಕೋಟಿ ರೂ. ವಂತಿಕೆಯನ್ನು ಎಸ್.ವಿ.ಪಿ ಸಂಸ್ಥೆ ಬ್ಯಾಂಕ್‍ಗಳ ಮೂಲಕ ಸಾಲ ಹಾಗೂ ಸದಸ್ಯರ ವಂತಿಗೆಯಾಗಿ ನೀಡಬೇಕಾಗಿದೆ. ಆದರೆ ಈವರೆಗೆ ಕೇವಲ 95 ಲಕ್ಷ ರೂ. ಮಾತ್ರ ವಂತಿಗೆ ನೀಡಿರುವುದರಿಂದ ಹಾಗೂ ಎಸ್.ಪಿ.ವಿ.ಸಂಸ್ಥೆ ಸದಸ್ಯರ ನಿರಾಸಕ್ತಿಯಿಂದಾಗಿ ಕಲಬುರ್ಗಿಯಲ್ಲಿ ಜವಳಿ ಪಾರ್ಕ್ ಸ್ಥಾಪಿಸಲು ವಿಳಂಬವಾಗಿದೆ ಎಂದು ಮುಖ್ಯಮಂತ್ರಿ ಸದನಕ್ಕೆ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News