ಕೊಡಗು ಮೂಲಸೌಕರ್ಯ ಅಭಿವೃದ್ಧಿಗೆ 77 ಕೋಟಿ ರೂ. : ಸಚಿವ ಕೃಷ್ಣ ಭೈರೇಗೌಡ

Update: 2018-12-18 16:46 GMT

ಬೆಳಗಾವಿ, ಡಿ.18: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಅತಿವೃಷ್ಟಿಯಿಂದ ಸಂಭವಿಸಿದ ಹಾನಿಯನ್ನು ಸರಿಪಡಿಸಲು ರಾಜ್ಯ ಮತ್ತು ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿ ಹಾಗೂ ವಿವಿಧ ಮೂಲಗಳಿಂದ ಒಟ್ಟು 77 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಭೈರೇಗೌಡ ಅವರು ರಾಜ್ಯ ವಿಧಾನ ಪರಿಷತ್‍ನಲ್ಲಿ ಇಂದು ಹೇಳಿದರು.

ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯೆ ಎಸ್. ವೀಣಾ ಅಚ್ಚಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಜಿಲ್ಲಾ ಪಂಚಾಯತ್ ರಸ್ತೆಗಳನ್ನು ಸರಿಪಡಿಸಲು ರಾಜ್ಯ ಸರ್ಕಾರವು ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ಕೋಶದಿಂದ 33.15 ಕೋಟಿ ರೂ. ಅನುದಾನ ಹಂಚಿಕೆ ಮಾಡಿದೆ. ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಮೂಲಕ ತಯಾರಿಸಿದ ಕ್ರಿಯಾ ಯೋಜನೆ ಅನುಮೋದಿಸಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಮಳೆಯಿಂದ ಹಾನಿಯಾಗಿರುವ ರಸ್ತೆಗಳ ತುರ್ತು ದುರಸ್ತಿಗಾಗಿ ಪ್ರತ್ಯೇಕವಾಗಿ 8.21 ಕೋಟಿ ರೂ. ಅನುದಾನದಲ್ಲಿ 122 ರಸ್ತೆಗಳನ್ನು ತುರ್ತು ಹಾಗೂ ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿದೆ. 2ನೇ ಹಂತದಲ್ಲಿ 5.15 ಕೋಟಿ ರೂ.ಗಳ ಕ್ರಿಯಾ ಯೋಜನೆ ತಯಾರಿಸಲಾಗಿದೆ ಎಂದು ಸಚಿವರು ವಿವರಿಸಿದರು.

ಕಾಫಿ ತೋಟಗಳ ರಸ್ತೆಗಳು ಕೂಡಾ ಹಾನಿಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹೆಚ್ಚು ಪರಿಹಾರ ಒದಗಿಸಿ ದುರಸ್ತಿಪಡಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News