ಶೌಚಾಲಯ ಬಳಕೆಗೆ ಫಲಾನುಭವಿಗಳ ಜಾಗೃತಿ ಮುಖ್ಯ: ಸಚಿವ ಕೃಷ್ಣ ಭೈರೇಗೌಡ

Update: 2018-12-18 16:54 GMT

ಬೆಳಗಾವಿ,ಡಿ.18: 2012-13 ರ ಆಧಾರ ರೇಖೆ (ಬೇಸ್‍ಲೈನ್) ಸಮೀಕ್ಷೆಯಂತೆ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಇದುವರೆಗೆ 72 ಲಕ್ಷ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ನಿಗದಿತ ಗುರಿಗಿಂತ ಒಂದು ವರ್ಷ ಮೊದಲೇ ಶೌಚಾಲಯಗಳ ನಿರ್ಮಾಣ ಪೂರ್ಣಗೊಳಿಸಿ ಗ್ರಾಮೀಣ ಪ್ರದೇಶದಲ್ಲಿ ಬಯಲು ಬಹಿರ್ದೆಸೆ ಮುಕ್ತ ರಾಜ್ಯ ಎಂದು ಘೋಷಿಸಲಾಗಿದೆ. ಆದರೆ, ಶೌಚಾಲಯಗಳ ಬಳಕೆಗೆ ಫಲಾನುಭವಿಗಳ ಜಾಗೃತಿ ಮತ್ತು ಜವಾಬ್ದಾರಿಯೇ ಮುಖ್ಯವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಭೈರೇಗೌಡ ಅವರು ರಾಜ್ಯ ವಿಧಾನ ಪರಿಷತ್‍ನಲ್ಲಿ ಮಂಗಳವಾರ ಹೇಳಿದರು.

ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಎನ್.ಅಪ್ಪಾಜಿಗೌಡ ಅವರ ಪ್ರಶ್ಬೆಗೆ ಉತ್ತರಿಸಿದ ಸಚಿವರು, ನಿರ್ಮಲ ಭಾರತ ಅಭಿಯಾನ ಹಾಗೂ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಶೇಕಡಾ 60 ಹಾಗೂ ಶೇಕಡಾ 40 ರ ಅನುಪಾತದಲ್ಲಿ 4207.65 ಕೋಟಿ ರೂ. ವೆಚ್ಚದಲ್ಲಿ 45.42 ಲಕ್ಷ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ರಾಜ್ಯದಲ್ಲಿ 2012-13 ರಿಂದ ಇಲ್ಲಿಯವರೆಗೆ ಒಟ್ಟು 72 ಲಕ್ಷ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇವುಗಳನ್ನು ಬಳಸುವುದು ಫಲಾನುಭವಿಗಳ ಜವಾಬ್ದಾರಿಯೂ ಕೂಡಾ ಆಗಿದೆ. ಹೊಸದಾಗಿ 4.60 ಲಕ್ಷ ಕುಟುಂಬಗಳಿಗೆ ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ. ಮುಂದಿನ ಜನವರಿ ಅಂತ್ಯದೊಳಗೆ ಇವು ಪೂರ್ಣಗೊಳ್ಳಲಿವೆ ಎಂದು ಸಚಿವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News