ವಿಧಾನಸಭೆ/ಪರಿಷತ್ ಸಭಾಂಗಣದಲ್ಲಿ ಅಂಬೇಡ್ಕರ್ ಭಾವಚಿತ್ರ ಅಳವಡಿಕೆ: ಸ್ಪೀಕರ್ ರಮೇಶ್‍ ಕುಮಾರ್

Update: 2018-12-18 16:56 GMT

ಬೆಳಗಾವಿ, ಡಿ.18: ಸುವರ್ಣ ವಿಧಾನಸೌಧದ ವಿಧಾನಸಭೆ ಸಭಾಂಗಣದಲ್ಲಿ ಒಂದು ವಾರದೊಳಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಅಳವಡಿಸುವುದಾಗಿ ಸ್ಪೀಕರ್ ಕೆ.ಆರ್.ರಮೇಶ್‍ ಕುಮಾರ್ ಭರವಸೆ ನೀಡಿದರು.

ಮಂಗಳವಾರ ವಿಧಾನಸಭೆಯ ಶೂನ್ಯವೇಳೆಯಲ್ಲಿ ಜೆಡಿಎಸ್ ಸದಸ್ಯ ಕೆ.ಅನ್ನದಾನಿ ವಿಷಯ ಪ್ರಸ್ತಾಪಿಸಿ, ಮಹಾತ್ಮ ಗಾಂಧೀಜಿ ಭಾವಚಿತ್ರ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸಭಾಂಗಣದಲ್ಲಿ ಅಳವಡಿಸಲಾಗಿದೆ. ಆದರೆ, ದೇಶಕ್ಕೆ ಸಂವಿಧಾನ ರಚಿಸಿಕೊಟ್ಟ ಅಂಬೇಡ್ಕರ್ ಅವರ ಭಾವಚಿತ್ರವಿಲ್ಲ. ಈ ಬಗ್ಗೆ ಗಮನ ಹರಿಸಬೇಕೆಂದು ಮನವಿ ಮಾಡಿದರು.

ಇದಕ್ಕೆ ಉತ್ತರ ನೀಡಿದ ರಮೇಶ್‍ ಕುಮಾರ್, ವಿಧಾನಸಭೆ ಸಭಾಂಗಣ ನನ್ನ ವ್ಯಾಪ್ತಿಗೆ ಒಳಪಡುತ್ತದೆ. ಕೂಡಲೇ ಕ್ರಮಕೈಗೊಳ್ಳುತ್ತೇನೆ. ಈ ಬಗ್ಗೆ ಮೊದಲೆ ಗಮನ ಹರಿಸಬೇಕಿತ್ತು. ವಿಳಂಬವಾಗಿದೆ, ಅದಕ್ಕಾಗಿ  ಕ್ಷಮೆ ಕೇಳುತ್ತೇನೆ. ಒಂದು ವಾರದೊಳಗಾಗಿ ಬೆಂಗಳೂರು ಮತ್ತು ಬೆಳಗಾವಿಯ ವಿಧಾನಸೌಧಗಳ ವಿಧಾನಸಭೆಗಳ ಸಭಾಂಗಣದಲ್ಲಿ ಅಂಬೇಡ್ಕರ್ ಭಾವಚಿತ್ರ ಅಳವಡಿಸುತ್ತೇವೆ. ವಿಧಾನಸಭೆಯಲ್ಲಿ ತೆಗೆದುಕೊಂಡ ನಿರ್ಣಯವನ್ನು ಉಲ್ಲೇಖಿಸಿ ವಿಧಾನ ಪರಿಷತ್ ಸಭಾಪತಿಯವರಿಗೂ ಪತ್ರ ಬರೆಯಲಾಗುವುದು ಎಂದು ಹೇಳಿದರು.

ವಿಧಾನಸಭೆ ಕಾರ್ಯದರ್ಶಿ ಮೂರ್ತಿಯವರನ್ನು ಕರೆದು ಅಂಬೇಡ್ಕರ್ ಅವರು ಲಕ್ಷಣವಾಗಿ ಕಾಣುವ ಭಾವಚಿತ್ರದ ಮಾದರಿಗಳನ್ನು ತಕ್ಷಣವೇ ತರಿಸಿ ಸೂಕ್ತವಾದುದನ್ನು ಆಯ್ಕೆ ಮಾಡಿ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News