ವಿಷ ಪ್ರಸಾದ ಪ್ರಕರಣ: ಟ್ರಸ್ಟ್ ಅಧ್ಯಕ್ಷನ ಸೂಚನೆಯಂತೆ ಪ್ರಸಾದಕ್ಕೆ ವಿಷ ಮಿಶ್ರಣ ?

Update: 2018-12-18 17:23 GMT

ಹನೂರು,ಡಿ.18: ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತು ಮಾರಮ್ಮ ದೇವಾಲಯದಲ್ಲಿ ಪ್ರಸಾದಕ್ಕೆ ವಿಷ ಮಿಶ್ರಣಗೊಂಡ ಪ್ರಕರಣವನ್ನು ಭೇದಿಸಿದ ತನಿಖಾ ತಂಡಕ್ಕೆ ದೇವಾಲಯದ ಟ್ರಸ್ಟ್ ಅಧ್ಯಕ್ಷ, ಸಾಲೂರು ಮಠದ ಕಿರಿಯ ಸ್ವಾಮೀಜಿಯ ಸೂಚನೆಯಂತೆ ಪ್ರಸಾದಕ್ಕೆ ವಿಷ ಬೆರೆಸಿರುವುದಾಗಿ ದೇವಸ್ಥಾನದ ವ್ಯವಸ್ಥಾಪಕ ಮಾದೇಶನ ಪತ್ನಿ ಅಂಬಿಕಾ ತಪ್ಪೊಪ್ಪಿಗೆ ನೀಡಿರುವುದಾಗಿ ತಿಳಿದು ಬಂದಿದೆ. 

ಡಿ.14ರಂದು ದೇವಾಲಯದಲ್ಲಿ ಪೂಜೆಯ ಬಳಿಕ ವಿಷ ಮಿಶ್ರಿತ ಪ್ರಸಾದ ಸೇವಿಸಿ 15 ಮಂದಿ ಮೃತಪಟ್ಟು 100ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಇನ್ನೂ ಹಲವರ ಸ್ಥಿತಿ ಗಂಭೀರವಾಗಿದೆ. ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾದ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಪೊಲೀಸ್ ಇಲಾಖೆ ಪ್ರಕರಣದ ತನಿಖೆಗೆ ಹಲವು ತಂಡಗಳನ್ನು ರಚಿಸಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿತ್ತು. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 15ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರಿಗೆ ದೇವಸ್ಥಾನದ ವ್ಯವಸ್ಥಾಪಕ ಮಾದೇಶನ ಪತ್ನಿ ಅಂಬಿಕಾ ಎಂಬಾಕೆ ಸಲೂರು ಮಠದ ಕಿರಿಯ ಸ್ವಾಮೀಜಿ ಹಾಗೂ ಕಿಚ್ಚುಗುಡಿ ಸುಳ್ವಾಡಿ ಮಾರಮ್ಮ ಟ್ರಸ್ಟ್ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮಿ ಅವರ ಸೂಚನೆಯಂತೆ ತಾನು ಪ್ರಸಾದಕ್ಕೆ ಕ್ರಿಮಿ ನಾಶಕ ಬೆರೆಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ ಎನ್ನಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಹಲವು ಮಂದಿ ಆರೋಪಿಗಳು ಪೊಲೀಸರ ವಶದಲ್ಲಿದ್ದು, ಉಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಟ್ರಸ್ಟ್ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮಿ, ವ್ಯವಸ್ಥಾಪಕ ಮಾದೇಶ್, ಮಾದೇಶನ ಪತ್ನಿ ಅಂಬಿಕಾ, ಪೂಜಾರಿ ಮಹದೇವ ಸಹಿತ ಇತರ ಆರೋಪಿಗಳನ್ನು ಮಂಗಳವಾರ ರಾತ್ರಿ ಅಥವಾ ಬುಧವಾರ ಕೊಳ್ಳೇಗಾಲ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News