ಎಂಎಸ್ಐಎಲ್ ಗೆ ಹೆಚ್ಚುವರಿ 900 ಸನ್ನದು ಹಂಚಿಕೆ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-12-18 17:45 GMT

ಬೆಳಗಾವಿ, ಡಿ.18: ಎಂಎಸ್ಐಎಲ್ ಸಂಸ್ಥೆಗೆ ರಾಜ್ಯಾದ್ಯಂತ 900 (ಸಿಎಲ್-2ಸಿ) ಸನ್ನದುಗಳನ್ನು ಹೆಚ್ಚುವರಿಯಾಗಿ ಹಂಚಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪ ವೇಳೆ ಶಾಸಕ ದುರ್ಯೋಧನ ಐಹೊಳೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 2009 ರಲ್ಲಿ ಪ್ರತಿ ತಾಲೂಕಿಗೆ ಎರಡು ಸನ್ನದುಗಳಂತೆ 352 ಸನ್ನದುಗಳು, ಜಿಲ್ಲಾ ಕೇಂದ್ರ ಸ್ಥಾನಕ್ಕೆ ಎರಡರಂತೆ 58 ಸನ್ನದುಗಳು ಹಾಗೂ ಎಂಎಸ್ಐಎಲ್ ಸಂಸ್ಥೆ ಪ್ರಾದೇಶಿಕ ಬೇಡಿಕೆ ಅಧ್ಯಯನ ಆಧರಿಸಿ ಕೋರಿಕೆ ಸಲ್ಲಿಸುವ ಸ್ಥಳಗಳಿಗೆ 53 ಸನ್ನದುಗಳಂತೆ ಒಟ್ಟು 463 ಸನ್ನದುಗಳನ್ನು ಹಂಚಿಕೆ ಮಾಡಲಾಗಿದೆ ಎಂದರು.

2016 ರಲ್ಲಿ 220 ವಿಧಾನಸಭಾ ಕ್ಷೇತ್ರಗಳಿಗೆ ತಲಾ ನಾಲ್ಕರಂತೆ 880, ಯಾದಗಿರಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಕ್ಕೆ ಐದು ಸನ್ನದುಗಳಂತೆ ಒಟ್ಟು 20, ಹೀಗೆ ರಾಜ್ಯಾದ್ಯಂತ ಒಟ್ಟು 900 (ಸಿಎಲ್-2ಸಿ) ಸನ್ನದುಗಳನ್ನು ಎಂ.ಎಸ್.ಐ.ಎಲ್ ಗೆ ಹಂಚಿಕೆ ಮಾಡಲಾಗಿದೆ ಎಂದು ಅವರು ವಿವರಿಸಿದರು.

ಕರ್ನಾಟಕ ಅಬಕಾರಿ ನಿಯಮಾವಳಿಯಂತೆ ಸರಕಾರಿ ಏಕಸ್ವಾಮ್ಯದ ಸಂಸ್ಥೆಗಳಿಗೆ ಖುದ್ದಾಗಿ ಸನ್ನದು ನಡೆಸುವ ಮತ್ತು ಬೇರೆ ವ್ಯಕ್ತಿಗಳಿಗೆ ಪರಭಾರೆ ನೀಡಬಾರದು ಎಂಬ ಷರತ್ತಿಗೊಳ್ಳಪಟ್ಟು ಸಿಎಲ್-(2ಸಿ) ಸನ್ನದು ಮಂಜೂರು ಮಾಡಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

ಅಲ್ಲದೆ ರಾಜ್ಯ ಅಥವಾ ರಾಷ್ಟ್ರೀಯ ಹೆದ್ದಾರಿ ಮಧ್ಯಭಾಗದಿಂದ 220 ಮೀಟರ್ ಅಂತರದಲ್ಲಿ ಮದ್ಯದ ಅಂಗಡಿ ಇರಬೇಕೆಂದು ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳಲ್ಲಿ ತಿಳಿಸಲಾಗಿದೆ ಎಂದು ಮುಖ್ಯಮಂತ್ರಿ ಸದನದ ಗಮನಕ್ಕೆ ತಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News