ದತ್ತಜಯಂತಿ ಭದ್ರತಗೆ 2300 ಪೊಲೀಸ್ ಸಿಬ್ಬಂದಿ: ಚಿಕ್ಕಮಗಳೂರು ಎಸ್ಪಿ ಹರೀಶ್ ಪಾಂಡೆ

Update: 2018-12-18 18:19 GMT

ಚಿಕ್ಕಮಗಳೂರು, ಡಿ.18: ದತ್ತಜಯಂತಿ ಮತ್ತು ದತ್ತಮಾಲಾ ಅಭಿಯಾನ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಮರುಕಳುಹಿಸದಂತೆ ಮುಂಜಾಗ್ರತಾ ಕ್ರಮವಾಗಿ ಕಳೆದ ಬಾರಿಯ ದತ್ತಜಯಂತಿ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದ್ದ ಸಿಬ್ಬಂದಿಗಿಂತ ಹೆಚ್ಚುವರಿ ಸಿಬ್ಬಂದಿಯನ್ನು ಈ ಬಾರಿ ನೇಮಿಸಲಾಗಿದೆ. ಈ ಮೂಲಕ ಬಿಗಿಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ 3,500 ಮಂದಿ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶ್ರೀರಂಗಯ್ಯ ಅವರೊಂದಿಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.20ರಿಂದ 22ರ ವರೆಗಿನ ದತ್ತಜಯಂತಿ ಮತ್ತು ದತ್ತಮಾಲಾ ಅಭಿಯಾನ ಕಾರ್ಯಕ್ರಮದ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಲು 4 ಮಂದಿ ಐಪಿಎಸ್ ಅಧಿಕಾರಿಗಳು 2 ಮಂದಿ ಹೆಚ್ಚುವರಿ ಅಧೀಕ್ಷಕರು 302 ಮಂದಿ ವೃತ್ತ ನಿರೀಕ್ಷಕರು, 250 ಮಂದಿ ನಿರೀಕ್ಷಕರು ಮತ್ತು ಎಎಸ್ಸೈ ಮುಖ್ಯ ಪೊಲೀಸ್ ಪೇದೆಗಳು, ಪೊಲೀಸ್ ಪೇದೆಗಳು ಸೇರಿದಂತೆ ಒಟ್ಟು 3,500 ಮಂದಿ ಪೊಲೀಸರು ಭದ್ರತಾ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಒಟ್ಟು ಸಂಘಪರಿವಾರದ 730 ಮಂದಿ ಮುಖಂಡರುಗಳಿಂದ ಭದ್ರತಾ ಬಾಂಡ್‍ಗಳನ್ನು ಪಡೆಯಲಾಗಿದೆ. ಹಾಗೆಯೇ ಸ್ಥಳೀಯ ರೌಡಿಶೀಟರ್ ಗಳು ಮತ್ತು ಹೊರ ಜಿಲ್ಲೆಗಳಲ್ಲಿ ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ರೌಡಿಶೀಟರ್ ಗಳಿಂದಲೂ ಭದ್ರತಾ ಬಾಂಡ್‍ಗಳನ್ನು ಪಡೆದುಕೊಳ್ಳಲಾಗಿದೆ ಎಂದರು.

ದತ್ತಜಯಂತಿ ಮತ್ತು ದತ್ತಮಾಲಾ ಕಾರ್ಯಕ್ರಮವನ್ನು ಶಾಂತಿಯುತವಾಗಿ ನಡೆಸಿಕೊಡುವಂತೆ ಸಂಘಟಕರಿಗೆ ಮನವಿ ಮಾಡಿಕೊಳ್ಳಲಾಗಿದೆ. ಈಗಾಗಲೇ ಭದ್ರತಾ ಬಾಂಡ್ ನೀಡಿರುವ ವ್ಯಕ್ತಿ ಯಾವುದೇ ಶಾಂತಿ ಕದಡುವ ಚಟುವಟಿಕೆಯಲ್ಲಿ ಭಾಗವಹಿಸಿರುವುದು ದಾಖಲೆಗಳಲ್ಲಿ ದೃಢಪಟ್ಟರೆ ಅಂತಹವರ ವಿರುದ್ಧ ಕಠಿಣ ಕ್ರಮ ಇಲಾಖೆ ಕೈಗೊಳ್ಳಲಾಗುವುದು ಎಂದ ಅವರು, ಶಾಂತಿ ಕದಡುವ ಶಕ್ತಿಗಳು ಜಿಲ್ಲೆಯನ್ನು ಪ್ರವೇಶಿಸದಂತೆ ಜಿಲ್ಲೆಯ ಆಯಾ ಕಟ್ಟಿನ 35 ಸ್ಥಳಗಳಲ್ಲಿ ಪೊಲೀಸ್ ಚೆಕ್‍ಪೋಸ್ಟ್ ಸ್ಥಾಪಿಸಲಾಗಿದೆ. ಅಗತ್ಯವಿರುವ 220 ಸ್ಥಳಗಳಲ್ಲಿ ಹೆಚ್ಚು ಸಾಮರ್ಥ್ಯವಿರುವ 220 ಸಿಸಿ ಟಿವಿಗಳನ್ನು ಅಳವಡಿಸುವ ಕಾರ್ಯ ಚಾಲನೆಯಲ್ಲಿದೆ ಎಂದು ಮಾಹಿತಿ ನೀಡಿದ ಅವರು, ಅದರೊಂದಿಗೆ ಹ್ಯಾಂಡಿಕ್ಯಾಮ್‍ಗಳು, ಡ್ರೋಣ್ ಕ್ಯಾಮರಾಗಳ ಕಣ್ಗಾವಲು ರಕ್ಷಣಾ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ ಎಂದು ಹೇಳಿದರು.

ಚಿಕ್ಕಮಗಳೂರು ನಗರದಿಂದ ದತ್ತಪೀಠದವರೆಗೂ 10 ಕಡಿದಾದ ರಸ್ತೆ 4 ಕಿರಿದಾದ ರಸ್ತೆ, 6 ಹೇರ್ ಪಿನ್ ತಿರುವುಗಳನ್ನು ಗುರುತಿಸಲಾಗಿದ್ದು, ಇದರಿಂದ ಸಂಭವಿಸಬಹುದಾದ ವಾಹನ ಸಂಚಾರ ತೊಡಕು ನಿವಾರಿಸಲು ಪ್ರತೀ 2 ಕಿ.ಮೀ.ಗೆ ಒಂದರಂತೆ ಸಂಚಾರಿ ತೊಡಕು ನಿವಾರಣಾ ಬೈಕ್ ಪೆಟ್ರೋಲಿಂಗ್ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ ಎಂದ ಅವರು, ಶೋಭಾಯಾತ್ರೆ ನಡೆಯುವ ದಿನದಂದು ಸುಗಮ ಸಂಚಾರಕ್ಕೆ ಅನುವಾಗುವಂತೆ ಅಂದು ಮುಂಜಾನೆಯಿಂದಲೇ ಐಜಿ ರಸ್ತೆ ಮತ್ತು ಎಂ.ಜಿ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ವಾಹನ ಸಂಚಾರಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.

ಜಿಲ್ಲಾಧಿಕಾರಿ ಶ್ರೀರಂಗಯ್ಯ ಮಾತನಾಡಿ, ಜಿಲ್ಲಾಡಳಿತದ ವತಿಯಿಂದ ಗಿರಿಯಲ್ಲಿ ನಡೆಯಲಿರುವ ದತ್ತಜಯಂತಿ ಕಾರ್ಯಕ್ರಮಕ್ಕೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಹಾಗೆಯೇ 20ರಂದು ನಡೆಯಲಿರುವ ಅನುಸೂಯ ಜಯಂತಿ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ ಎಂದ ಅವರು, ಈಗಾಗಲೇ ದತ್ತ ಭಕ್ತರ ಸಭೆ ನಡೆಸಿ ಅವರ ಕೋರಿಕೆಯಂತೆ ಸಾರಿಗೆ ವ್ಯವಸ್ಥೆ, ಕುಡಿಯುವ ನೀರು, ರಸ್ತೆ ಅಗಲೀಕರಣ, ಸ್ವಚ್ಛತೆ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.

ಈ ಕಾರ್ಯಕ್ರಮಗಳ ಸಂದರ್ಭದಲ್ಲಿ ಜಿಲ್ಲಾದ್ಯಂತ ಶಾಂತಿ ಸುವ್ಯವಸ್ಥೆ ಕಾಪಾಡಲು ಅಪರ ಜಿಲ್ಲಾಧಿಕಾರಿಗಳು ಮತ್ತು 41 ಮಂದಿ ಕಾರ್ಯನಿರ್ವಾಹಕ ದಂಡಾಧಿಕಾರಿಗಳನ್ನು ಸರಕಾರದ  ಸೂಚನೆಯಂತೆ ನೇಮಕ ಮಾಡಿಕೊಂಡು ಅಗತ್ಯವಿರುವ ಆಯಾ ಕಟ್ಟಿನ ಸ್ಥಳಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದ ಅವರು, ಹೊರ ಜಿಲ್ಲೆಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರು ಆಶಾಂತಿ ಸೃಷ್ಟಿಸಲು ಅವಕಾಶ ನೀಡದಂತೆ ಸಂಘಟಕರು ಜವಾಬ್ದಾರಿ ನಿರ್ವಹಿಸುವಂತೆ ಕೋರಿಕೊಳ್ಳಲಾಗಿದೆ ಎಂದರು.

ಕಳೆದ ವರ್ಷ ಗೋರಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಪೆಟ್ರೋಲ್‍ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಹ ಸಲ್ಲಿಸಲಾಗಿದ್ದು, ವಿಚಾರಣಾ ಪ್ರಕ್ರಿಯೆ ಪ್ರಗತಿಯಲ್ಲಿದೆ.
- ಎಂ.ಕೆ.ಶ್ರೀರಂಗಯ್ಯ, ಜಿಲ್ಲಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News