ವಿಷ ಪ್ರಸಾದ ಪ್ರಕರಣ: ಮೃತರ ಕುಟುಂಬಗಳಿಗೆ ಪರಿಹಾರ ವಿತರಣೆ

Update: 2018-12-18 18:23 GMT

ಚಾಮರಾಜನಗರ,ಡಿ.18: ಸುಳ್ವಾಡಿ ಪ್ರಕರಣ ಸಂತ್ರಸ್ತರಿಗೆ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಪರಿಹಾರವನ್ನು ಅವರ ಮನೆಗಳಿಗೆ ಹೋಗಿ ವಿತರಿಸಿದರು.

ಕಳೆದ ಶುಕ್ರವಾರ ಕುಚ್ಚು ಗುತ್ತಿ ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ತಿಂದು ಮೃತಪಟ್ಟ ಅನಿತಾ, ಕೃಷ್ಣ ನಾಯಕ ಹಾಗೂ ಪತ್ನಿ ಮೈಲಿಬಾಯಿ ಅವರ ಮನೆಗೆ ತೆರಳಿ ಅವರ ಕುಟುಂಬದವರಿಗೆ ಐದು ಲಕ್ಷ ರೂ. ಗಳ ಚೆಕ್ ಮತ್ತು ವೈಯಕ್ತಿಕ ಪರಿಹಾರ, ನಗದು ಹಾಗೂ ಅಕ್ಕಿ ವಿತರಣೆ ಮಾಡಿದರು.

ಮಾರ್ಟಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಾದ ಬಿದರಹಳ್ಳಿ, ಸುಲ್ವಾಡಿ, ಕೋಟೆಪೇದೆ, ದೊರೆಸ್ವಾಮಿ ದೊಡ್ಡಿ, ಗ್ರಾಮಗಳಲ್ಲಿನ ಮೃತಪಟ್ಟ ಕುಟುಂಬ ವರ್ಗಕ್ಕೆ ಅವರ ಮನೆಗಳಿಗೆ ತೆರಳಿ ಚೆಕ್ ವಿತರಣೆ ಮಾಡಿ ಅವರಿಗೆ ಸಾಂತ್ವನ ಹೇಳಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮುಖ್ಯಮಂತ್ರಿಗಳು ಪರಿಹಾರವನ್ನು ನೀಡಲು ಹೇಳಿದಂತೆ ನಾವು ಇಂದು ಮೃತರ ಕುಟುಂಬ ವರ್ಗಕ್ಕೆ ಐದು ಲಕ್ಷ ರೂ. ಗಳ ಚೆಕ್ಕನ್ನು ನೀಡಿದ್ದಲ್ಲದೇ ನಮ್ಮಿಂದ ಹಾಗೂ ಕೆಪಿಸಿಸಿಯ ವತಿಯಿಂದ ನಗದು ಹಣವನ್ನು ವಿತರಣೆ ಮಾಡಲಾಗಿದೆ. ಈ ಪ್ರಕರಣದಲ್ಲಿರುವ ಕಿಡಿಗೇಡಿಗಳನ್ನು ಬಂಧಿಸಲಾಗಿದ್ದು, ಅವರಿಂದ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆಯಲಾಗುತ್ತಿದೆ. ಅವರಿಗೆ ತಕ್ಕ ಶಿಕ್ಷೆಯನ್ನು ಕೊಡಿಸಲಾಗುವುದು ಎಂದ ಅವರು, ಈಗಾಗಲೇ ಇಂದು ಮೃತಪಟ್ಟ ದೊಡ್ಡಮ್ಮ ಸೇರಿದಂತೆ 15 ಜನರು ಮೃತಪಟ್ಟಿದ್ದು ಇವರೆಲ್ಲರಿಗೂ ಇಂದು ಪರಿಹಾರವನ್ನು ನೀಡಲಾಗಿದೆ. ಇನ್ನುಳಿದಂತೆ ಚಿಕಿತ್ಸಾ ಹಂತದಲ್ಲಿರುವವರಿಗೆ ಉನ್ನತ ಮಟ್ಟದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಅವರು ಶೀಘ್ರ ಗುಣಮುಖರಾಗಲಿದ್ದಾರೆಂದರು.

ಹನೂರು ಶಾಸಕ ಆರ್.ನರೇಂದ್ರ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶಿವಮ್ಮಕೃಷ್ಣ, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಉಪ ವಿಭಾಗಾಧಿಕಾರಿ ಫೌಜಿಯಾ ತರನ್ನುಮ್, ತಹಶೀಲ್ದಾರ್ ಶಿವರಾಂ ಸೇರಿದಂತೆ ಮತ್ತಿತರ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News