ಸಿಖ್ ಹತ್ಯಾಕಾಂಡದ ಹಿಂದೆ ಸಂಘಪರಿವಾರದ ಕೈಗಳು

Update: 2018-12-19 04:53 GMT

ಕೆಲವೊಮ್ಮೆ ಸಂತ್ರಸ್ತರಿಗೆ ಸಿಗುವ ನ್ಯಾಯವೇ ಅನ್ಯಾಯವಾಗಿ ಬಿಡುವುದು. ಸಿಖ್ ವಿರೋಧಿ ಗಲಭೆಗೆ ಸಂಬಂಧಿಸಿದಂತೆ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಸಜ್ಜನ್ ಕುಮಾರ್ ಅವರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆಯಾದರೂ, ಇದನ್ನು ಎಷ್ಟರ ಮಟ್ಟಿಗೆ ‘ನ್ಯಾಯ’ ಎಂದು ಕರೆಯಬಹುದು ಎನ್ನುವುದರ ಬಗ್ಗೆ ಅನುಮಾನ ಇದ್ದೇ ಇದೆ. ಸಾವಿರಾರು ಸಿಖ್ಖರನ್ನು ಬರ್ಬರವಾಗಿ ಹತ್ಯಾಕಾಂಡವೆಸಗಲು ಸಂಚು ರೂಪಿಸಿದ ರಾಜಕಾರಣಿಯೊಬ್ಬ 30 ವರ್ಷದ ಬಳಿಕವೂ ಆರೋಪಿಯಾಗಿಯೇ ಉಳಿದಿದ್ದಾನೆಯೇ ಹೊರತು ಇನ್ನೂ ಶಿಕ್ಷೆ ಅನುಭವಿಸಿಲ್ಲ ಎನ್ನುವುದಕ್ಕಿಂತ ದೊಡ್ಡ ಅನ್ಯಾಯ ಇನ್ನೇನಿದೆ? ನ್ಯಾಯ ವಿಳಂಬ ನ್ಯಾಯ ವ್ಯವಸ್ಥೆಯ ಅತಿ ದೊಡ್ಡ ಸೋಲು. ಸಿಖ್ ಹತ್ಯಾಕಾಂಡ ವಿಷಯದಲ್ಲಿ ಸಜ್ಜನ್‌ಗೆಜೀವಾವಧಿ ಶಿಕ್ಷೆಯನ್ನೇನೋ ಘೋಷಿಸಲಾಗಿದೆ. ಆದರೆ ಅವರಿಗೆ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಇನ್ನೂ ಅವಕಾಶವಿದೆ. ಈಗಾಗಲೇ ಅವರಿಗೆ 73 ವರ್ಷ. ಸುಪ್ರೀಂಕೋರ್ಟ್ ಏನಾದರೂ ಪ್ರಕರಣವನ್ನು ವಿಚಾರಣೆಗೆ ಎತ್ತಿದರೆ, ಅದು ಮುಗಿಯುವಷ್ಟರಲ್ಲಿ ಆರೋಪಿ ಜೀವಂತವಾಗಿರುತ್ತಾನೆ ಎನ್ನುವ ಭರವಸೆಯೇ ಇಲ್ಲ. ಸಣ್ಣ ಪುಟ್ಟ ಕೊಲೆ, ದರೋಡೆಗಳ ಸಂದರ್ಭಗಳಲ್ಲಿ ಎಚ್ಚರವಾಗಿರುವ ಸಂವಿಧಾನ ಹತ್ಯಾಕಾಂಡದ ದಿನ ರಜೆಯಲ್ಲಿರುತ್ತದೆ ಎನ್ನುವ ವ್ಯಂಗ್ಯ ಈ ಹಿನ್ನೆಲೆಯಲ್ಲಿಯೇ ಹುಟ್ಟಿರಬೇಕು. ಯಾಕೆಂದರೆ, ಸಿಖ್ ಹತ್ಯಾಕಾಂಡದಲ್ಲಿ ಕೊಲೆ, ಹಲ್ಲೆ, ದರೋಡೆ ನಡೆಸಿದ ನೂರಾರು ಜನರು ಯಾವುದೇ ಶಿಕ್ಷೆಯಿಲ್ಲದೇ ಈಗಲೂ ಓಡಾಡಿಕೊಂಡಿದ್ದಾರೆ. ಮಾತ್ರವಲ್ಲ, ಇನ್ನಷ್ಟು ಗಲಭೆಗಳಲ್ಲಿ ಬಳಿಕ ಗುರುತಿಸಿಕೊಳ್ಳುತ್ತಾ ಬಂದಿದ್ದಾರೆ. ಎಲ್ಲಕ್ಕಿಂತ ವಿಪರ್ಯಾಸದ ಸಂಗತಿಯೆಂದರೆ, ಸಿಖ್ ಹತ್ಯಾಕಾಂಡದ ಕಳಂಕವನ್ನು ಮೈಮೇಲೆ ಮೆತ್ತಿಕೊಂಡಿದ್ದ ಇನ್ನೊಬ್ಬ ಹಿರಿಯ ನಾಯಕ, ಇದೀಗ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಸಿಖ್ ಹತ್ಯಾಕಾಂಡಕ್ಕಾಗಿ ಕಾಂಗ್ರೆಸ್ ಮರುಗಿದೆ, ಕ್ಷಮೆಯಾಚಿಸಿದೆ ಮತ್ತು ಪಶ್ಚಾತ್ತಾಪ ಪಟ್ಟಿದೆ ಎಂದು ಅದರ ನಾಯಕರು ಹೇಳಿಕೊಂಡಿದ್ದಾರೆ. ಅದೆಲ್ಲ ನಿಜವೇ ಆಗಿದ್ದರೆ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಕಮಲನಾಥ್ ಯಾಕೆ ಆಯ್ಕೆಯಾದರು? ಎಂಬ ಪ್ರಶ್ನೆಗೆ ಕಾಂಗ್ರೆಸ್ ಮುಖಂಡರು ಉತ್ತರಿಸಬೇಕಾಗುತ್ತದೆ. ಸಿಖ್ ಹತ್ಯಾಕಾಂಡದ ನೇತೃತ್ವವನ್ನು ವಹಿಸಿರುವುದು ಅಂದಿನ ಕೆಲವು ಕಾಂಗ್ರೆಸ್ ಮುಖಂಡರೇ ಆಗಿದ್ದರೂ, ಆ ಹತ್ಯಾಕಾಂಡದಲ್ಲಿ ಸಂಘಪರಿವಾರ ಅದರಲ್ಲೂ ಮುಖ್ಯವಾಗಿ ಆರೆಸ್ಸೆಸ್ ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸಿದ್ದರು ಎನ್ನುವ ಆರೋಪಗಳನ್ನು ನಿರಾಕರಿಸುವಂತಿಲ್ಲ. ಗಲಭೆಯ ಸಂದರ್ಭದಲ್ಲಿ 49 ಬಿಜೆಪಿ ಮತ್ತು ಆರೆಸ್ಸೆಸ್ ಮುಖಂಡರ ಮೇಲೆ 14 ಎಫ್‌ಐಆರ್‌ಗಳು ದಾಖಲಾಗಿವೆ ಎನ್ನುವುದೇ ಹತ್ಯಾಕಾಂಡದ ಹಿಂದಿರುವ ಕರಾಳತೆಯನ್ನು ಹೇಳುತ್ತದೆ. ಇಂದಿರಾಗಾಂಧಿಯ ಕೊಲೆಗೂ ಆರೆಸ್ಸೆಸ್ ಮತ್ತು ಬಿಜೆಪಿಗೂ ಏನು ಸಂಬಂಧ? ಸಿಖ್ ಹತ್ಯಾಕಾಂಡ ಅಲ್ಪಸಂಖ್ಯಾತರ ಮೇಲೆ ಈ ದೇಶದಲ್ಲಿ ನಡೆಯುತ್ತಾ ಬಂದ ದೌರ್ಜನ್ಯಗಳ ಮುಂದುವರಿದ ಭಾಗವಾಗಿದೆ. ಸಿಖ್ಖರು ಮತ್ತು ಸಂಘಪರಿವಾರ ನಡುವಿನ ವೈಷಮ್ಯ ತೀರಾ ಹಳೆಯದು. ಆರ್ಯ ಸಮಾಜ ಸಿಖ್ಖ್ಖರನ್ನು ಖಂಡತುಂಡವಾಗಿ ವಿರೋಧಿಸುತ್ತಾ ಬಂತು. ದಯಾನಂದ ಸರಸ್ವತಿಯವರ ಸತ್ಯಾರ್ಥ ಪ್ರಕಾಶದಲ್ಲಿ ಸಿಖ್ಖರ ಕುರಿತ ಅಸಹನೆಯನ್ನು ನಾವು ಗುರುತಿಸಬಹುದು. ಪಂಜಾಬಿನ ಹಿಂದುಳಿದ ವರ್ಗದ ಬಹುದೊಡ್ಡ ಸಮೂಹ ಸಿಖ್ ಧರ್ಮಕ್ಕೆ ಮತಾಂತರಗೊಂಡಿದ್ದವು. ಅವರನ್ನು ಮರು ಮತಾಂತರಗೊಳಿಸುವ ಆರೆಸ್ಸೆಸ್ ಮತ್ತು ಆರ್ಯ ಸಮಾಜದ ಪ್ರಯತ್ನ ಸಂಘರ್ಷಕ್ಕೆ ತಿರುಗಿತು. ಇದೇ ಸಂದರ್ಭದಲ್ಲಿ ಖಾಲಿಸ್ತಾನದ ಹೋರಾಟ ಬೆಳೆಯಿತು. ಇಂದಿರಾಗಾಂಧಿಯ ಹತ್ಯೆ ನಡೆಯಿತು. ಈ ಹತ್ಯೆಯ ಸಂದರ್ಭವನ್ನು ಆರೆಸ್ಸೆಸ್ ಕೂಡ ಬಳಸಿಕೊಂಡಿತು. ಆರೆಸ್ಸೆಸ್‌ನ ಮುಖಂಡ, ರಾಜಕಾರಣಿ ನಾನಾಜಿ ದೇಶ್ ಮುಖ್ ಸಿಖ್ ಹತ್ಯಾಕಾಂಡವನ್ನು ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದಾರೆ. ಹತ್ಯೆಗೆ ಅವರು ಸರ್ವ ರೀತಿಯಲ್ಲಿ ಅರ್ಹರು ಎನ್ನುವುದನ್ನೂ ತಮ್ಮ ಹೇಳಿಕೆಯಲ್ಲಿ ವ್ಯಕ್ತಪಡಿಸಿದ್ದಾರೆ. ಆದುದರಿಂದಲೇ, ಸಿಖ್ ಹತ್ಯಾಕಾಂಡವನ್ನು ಕಾಂಗ್ರೆಸ್ ನಡೆಸಿತು ಎನ್ನುವುದಕ್ಕಿಂತ ಜನಾಂಗೀಯವಾದಿ ಮನಸ್ಥಿತಿಗಳು ಒಂದಾಗಿ ನಡೆಸಿದವು ಎನ್ನುವುದೇ ಸರಿ. ಅವರಿಗೆ ತಮ್ಮ ತಲೆ ತಲಾಂತರ ಸೇಡನ್ನು ತೀರಿಸಲು ಇಂದಿರಾಗಾಂಧಿಯ ಹತ್ಯೆ ಒಂದು ನೆಪವಾಯಿತು. ಆ ಜನಾಂಗೀಯವಾದಿ ಮನಸ್ಥಿತಿಯೇ ಮುಂದೆ ಮುಂಬೈ ಗಲಭೆಗಳಲ್ಲಿ ಭಾಗವಹಿಸಿದವು. ಗುಜರಾತ್ ಹತ್ಯಾಕಾಂಡದಲ್ಲಿ ಅಮಾಯಕ ಮುಸ್ಲಿಮರನ್ನು ಬರ್ಬರವಾಗಿ ಕೊಂದು ಹಾಕಿದವು.

ಗುಜರಾತ್ ಹತ್ಯಾಕಾಂಡ ತೆಗೆದುಕೊಳ್ಳೋಣ. ಇಲ್ಲಿ ಸಂಘಪರಿವಾರ ನೇರವಾಗಿ ಪಾತ್ರವಹಿಸಿತ್ತು ಎನ್ನುವುದು ನಿಜ. ಆದರೆ ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಇತರ ಪಕ್ಷಗಳಲ್ಲಿದ್ದ ದೊಡ್ಡ ಸಂಖ್ಯೆಯ ನಾಯಕರು ಮೌನವಾಗಿಯೇ ಆ ಹತ್ಯಾಕಾಂಡಕ್ಕೆ ಸಮ್ಮತಿಯನ್ನು ನೀಡಿದ್ದರು ಎನ್ನುವುದನ್ನು ನಾವು ಮರೆಯಬಾರದು. ಇಂದು ಸಾರ್ವಜನಿಕವಾಗಿ ಸಂಘಪರಿವಾರ ನಡೆಸುತ್ತಿರುವ ಗುಂಪು ಹತ್ಯೆ, ಗೋವುಗಳ ಹೆಸರಿನಲ್ಲಿ ನಡೆಯುವ ಹಿಂಸಾಚಾರವನ್ನು ಒಳಗೊಳಗೆ ಸಮರ್ಥಿಸಿಕೊಳ್ಳುವ ನಾಯಕರು ಕಾಂಗ್ರೆಸ್‌ನೊಳಗೂ ಇದ್ದಾರೆ. ಇತರ ಜಾತ್ಯತೀತ ಪಕ್ಷಗಳಲ್ಲೂ ಇದ್ದಾರೆ. ಅವರ ಮೌನವೇ ಸಂಘಪರಿವಾರದ ಬಲ ಎನ್ನುವುದನ್ನು ನಾವು ಮರೆಯಬಾರದು. ಈ ಎಲ್ಲ ಕಾರಣಗಳಿಂದ, ಒಬ್ಬ ಸಜ್ಜನ್ ಕುಮಾರ್‌ಗೆ ಶಿಕ್ಷೆ ಘೋಷಣೆಯಾಯಿತು ಎಂದಾಕ್ಷಣ ಸಂತ್ರಸ್ತರಿಗೆ ಶಿಕ್ಷೆಯಾಯಿತು ಎಂದು ಸಂಭ್ರಮಿಸುವುದು ನಮ್ಮ ಮೂರ್ಖತನವಾಗಿದೆ. ಸಿಖ್ ಹತ್ಯಾಕಾಂಡದಲ್ಲಿ ಭಾಗವಹಿಸಿದ ಮನಸ್ಥಿತಿಯೇ ಗುಜರಾತ್ ಹತ್ಯಾಕಾಂಡದಲ್ಲಿ ಭಾಗವಹಿಸಿತು. ಸಿಖ್ ಹತ್ಯಾಕಾಂಡದಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ಪಾತ್ರವಹಿಸಿದ ಪ್ರಮುಖರಿಗೆ ಕಠಿಣ ಶಿಕ್ಷೆಯಾಗಿದ್ದರೆ 1992ರಲ್ಲಿ ಕೋಮುಗಲಭೆ ಸಂಭವಿಸುತ್ತಿರಲಿಲ್ಲ. 2002ರಲ್ಲಿ ಗುಜರಾತ್ ಗಲಭೆಯೂ ನಡೆಯುತ್ತಿರಲಿಲ್ಲ. ಅವೆಲ್ಲವೂ ಸಿಖ್ ಹತ್ಯಾಕಾಂಡದ ಮುಂದುವರಿದ ಭಾಗ. ಈ ಹಿನ್ನೆಲೆಯಲ್ಲಿಯೇ ಸಿಖ್ ಹತ್ಯಾಕಾಂಡದ ಕುರಿತಂತೆ ತೀರ್ಪು ನೀಡುವಾಗ ನ್ಯಾಯಾಲಯವೂ 2002ರ ಗುಜರಾತ್ ಹತ್ಯಾಕಾಂಡವನ್ನು ಪ್ರಸ್ತಾಪಿಸಿತು. ಸಾಮೂಹಿಕ ಹತ್ಯಾಕಾಂಡದಲ್ಲಿ ಭಾಗವಹಿಸಿದ ಪಾತಕಿಗಳು ರಾಜಕೀಯ ಕೃಪಾಶ್ರಯ ಹೊಂದಿರುವ ಬಗ್ಗೆ ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ. ಈ ಕಾರಣದಿಂದಲೇ ನರಮೇಧಕ್ಕೆ ಸಂಬಂಧಿಸಿ ಆರೋಪಿಗಳಿಗೆ ಶಿಕ್ಷೆ ನೀಡುವುದು ಕಷ್ಟವಾಗುತ್ತಿದೆ ಎಂದು ಅದು ಹೇಳಿದೆ. ಒಡಿಶಾ, ಕಂಧಮಾಲ್, ಗುಜರಾತ್ ಹತ್ಯಾಕಾಂಡಗಳು ಸಿಖ್ ಹತ್ಯಾಕಾಂಡಕ್ಕಿಂತ ಭಿನ್ನವಾದುದಲ್ಲ, ಅದರ ಮುಂದುವರಿದ ಭಾಗ ಎಂದು ನ್ಯಾಯಾಲಯವೇ ಸ್ಪಷ್ಟಪಡಿಸಿದೆ. ದುರದೃಷ್ಟವಶಾತ್ ಗುಜರಾತ್ ಹತ್ಯಾಕಾಂಡದಲ್ಲಿ ನೇರ ಪಾತ್ರವಹಿಸಿದವರೆಲ್ಲ ದೇಶದ ಉನ್ನತ ಹುದ್ದೆಯಲ್ಲಿದ್ದಾರೆ. ಅಷ್ಟೇ ಅಲ್ಲ, ಅವರು ಸಿಖ್ ಹತ್ಯಾಕಾಂಡದ ಸಂತ್ರಸ್ತರಿಗೆ ನ್ಯಾಯ ನೀಡುವ ಮಾತುಗಳನ್ನಾಡುತ್ತಿದ್ದಾರೆ. ಗುಜರಾತ್ ಹತ್ಯಾಕಾಂಡದ ಆರೋಪಗಳು ಬಂದಾಗ ಗುರಾಣಿಯಾಗಿಯಷ್ಟೇ ಮೋದಿ ಬಳಕ ಸಿಖ್ ಹತ್ಯಾಕಾಂಡವನ್ನು ಬಳಸಿಕೊಳ್ಳುತ್ತಿದೆ. ಉಳಿದಂತೆ ಆಳದಲ್ಲಿ ಅವರಿಗೆ ಅದರ ಕುರಿತಂತೆ ವಿಷಾದವಿಲ್ಲ. ಕಾಂಗ್ರೆಸ್ ಕನಿಷ್ಠ ಹತ್ಯಾಕಾಂಡಕ್ಕೆ ವಿಷಾದವನ್ನಾದರೂ ವ್ಯಕ್ತಪಡಿಸಿದೆ. ಮೋದಿ ಸರಕಾರ ಈವರೆಗೆ ಗುಜರಾತ್ ಹತ್ಯಾಕಾಂಡಕ್ಕಾಗಿ ದೇಶದ ಕ್ಷಮೆಯಾಚಿಸಿಲ್ಲ ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ಈ ದೇಶದಲ್ಲಿ ನಡೆಯುವ ಹತ್ಯಾಕಾಂಡದ ಕಾರಣಗಳನ್ನು ಗುರುತಿಸುವ ಮತ್ತು ಅದರ ಹಿಂದಿರುವ ರಾಜಕೀಯ ಶಕ್ತಿಗಳು ಶಿಕ್ಷೆಯಿಂದ ಪಾರಾಗದಂತೆ ನೋಡಿಕೊಳ್ಳುವ, ಹತ್ಯಾಕಾಂಡ ಪ್ರಕರಣಗಳ ತುರ್ತು ವಿಚಾರಣೆ ನಡೆಯುವಂತಹ ಕಾನೂನು ಸದ್ಯದ ಅಗತ್ಯವಾಗಿದೆ. ಅದುವೇ ಸಿಖ್ ಹತ್ಯಾಕಾಂಡದಲ್ಲಿ ಮೃತಪಟ್ಟವರಿಗೆ ಸಲ್ಲಿಸುವ ನಿಜವಾದ ನ್ಯಾಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News