ಪತ್ರಕರ್ತರಿಗೆ ‘ಅತ್ಯಂತ ಅಪಾಯಕಾರಿ ದೇಶಗಳ ಪಟ್ಟಿ’ಯಲ್ಲಿ ಭಾರತಕ್ಕೆ 5ನೇ ಸ್ಥಾನ !

Update: 2018-12-19 14:54 GMT

ಹೊಸದಿಲ್ಲಿ,ಡಿ.19: ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ (ಆರ್‌ಎಸ್‌ಎಫ್)ನ ಹೊಸ ವರದಿ ಪ್ರಕಾರ, ಪತ್ರಕರ್ತರಿಗೆ ಅತ್ಯಂತ ಅಪಾಯಕಾರಿ ದೇಶಗಳ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಪಟ್ಟಿಯಲ್ಲಿ ಅಫ್ಘಾನಿಸ್ತಾನ ಮೊದಲ ಸ್ಥಾನದಲ್ಲಿದ್ದರೆ, ಸಿರಿಯಾ ಎರಡನೇ ಮತ್ತು ಮೆಕ್ಸಿಕೊ ಮೂರನೇ ಸ್ಥಾನದಲ್ಲಿದೆ.

ಹಾಲಿ ವರ್ಷದಲ್ಲಿ ಈತನಕ 80 ಪತ್ರಕರ್ತರನ್ನು ಹತ್ಯೆ ಮಾಡಲಾಗಿದೆ. ಈ ಪೈಕಿ 63 ವೃತ್ತಿಪರ ಪತ್ರಕರ್ತರಾಗಿದ್ದಾರೆ. ಕಳೆದ ವರ್ಷ 55 ವೃತ್ತಿಪರ ಪತ್ರಕರ್ತರನ್ನು ಹತ್ಯೆ ಮಾಡಲಾಗಿತ್ತು. ಇದೇ ವೇಳೆ 348 ಪತ್ರಕರ್ತರನ್ನು ವಶಕ್ಕೆ ಪಡೆಯಲಾಗಿದ್ದರೆ 60 ಮಂದಿಯನ್ನು ಒತ್ತೆಯಾಳುಗಳನ್ನಾಗಿ ಮಾಡಲಾಗಿದೆ ಮತ್ತು ಮೂವರು ನಾಪತ್ತೆಯಾಗಿದ್ದಾರೆ ಎಂದು ವರದಿ ತಿಳಿಸಿದೆ.

80 ಪತ್ರಕರ್ತರ ಪೈಕಿ 49 ಮಂದಿಯನ್ನು ಅವರ ವರದಿಯಿಂದ ರಾಜಕೀಯ, ಆರ್ಥಿಕ ಅಥವಾ ಧಾರ್ಮಿಕ ಅಧಿಕಾರ ಅಥವಾ ಸಂಘಟಿತ ಅಪರಾಧದಲ್ಲಿ ಭಾಗಿಯಾಗಿದ್ದ ವ್ಯಕ್ತಿಗಳಿಗೆ ತೊಂದರೆಯಾಗಲಿದ್ದ ಕಾರಣ ಅವರನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 2018ರಲ್ಲಿ ಅಫ್ಘಾನಿಸ್ತಾನದಲ್ಲಿ 15 ಪತ್ರಕರ್ತರನ್ನು ಹತ್ಯೆ ಮಾಡಲಾಗಿದ್ದರೆ ಸಿರಿಯಾದಲ್ಲಿ 11, ಮೆಕ್ಸಿಕೊದಲ್ಲಿ 9, ಯಮನ್‌ನಲ್ಲಿ ಎಂಟು, ಭಾರತ ಮತ್ತು ಅಮೆರಿಕದಲ್ಲಿ ತಲಾ ಆರು ಪತ್ರಕರ್ತರನ್ನು ಹತ್ಯೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ. 2003ರ ಅಮೆರಿಕ ನೇತೃತ್ವದ ದಾಳಿಯ ನಂತರ ಇದೇ ಮೊದಲ ಬಾರಿ ಇರಾಕ್‌ನಲ್ಲಿ ಯಾವುದೇ ಪತ್ರಕರ್ತನ ಹತ್ಯೆ ನಡೆದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News