ದ.ಕ ಜಿಲ್ಲೆಯಲ್ಲಿ ಡ್ರೈವಿಂಗ್ ತರಬೇತಿ ಕೇಂದ್ರ ಕಾಮಗಾರಿಗೆ ಮಂಜೂರಾತಿ: ಸಚಿವ ಡಿ.ಸಿ.ತಮ್ಮಣ್ಣ

Update: 2018-12-19 15:50 GMT

ಬೆಂಗಳೂರು, ಡಿ.19: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಪ್ರಾದೇಶಿಕ ಸಾರಿಗೆ ಇಲಾಖೆ ವ್ಯಾಪ್ತಿಯಲ್ಲಿ ಡ್ರೈವಿಂಗ್ ತರಬೇತಿ ಕೇಂದ್ರವನ್ನು ಪ್ರಾರಂಭಿಸುವುದಾಗಿ 2013-14ನೆ ಸಾಲಿನ ಆಯವ್ಯಯದಲ್ಲಿ ಘೋಷಿಸಲಾಗಿದ್ದು, ಸದರಿ ತರಬೇತಿ ಕೇಂದ್ರ ಕಾಮಗಾರಿಗೆ ಮಂಜೂರಾತಿ ನೀಡಲಾಗಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ.

ಬುಧವಾರ ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ಐವನ್ ಡಿ’ಸೋಜಾ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಅವರು, ಡ್ರೈವಿಂಗ್ ತರಬೇತಿ ಕೇಂದ್ರದ ಕಾಮಗಾರಿಯು ಶೇ.20ರಷ್ಟು ಪೂರ್ಣಗೊಂಡಿದ್ದು, ಉಳಿದಂತೆ ಪ್ರಗತಿಯಲ್ಲಿದೆ. 2019ರ ಅಂತ್ಯಕ್ಕೆ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಮಂಗಳೂರು ಕಚೇರಿಯಲ್ಲಿ ದಿನ ಒಂದಕ್ಕೆ 60 ಅಭ್ಯರ್ಥಿಗಳಿಗೆ ಕಲಿಕಾ ಚಾಲನಾ ಪರವಾನಿಗೆ ಮತ್ತು 70 ರಿಂದ 100 ಚಾಲನಾ ಪರವಾನಿಗೆಗಳನ್ನು ಪರಿಶೀಲಿಸಲಾಗುತ್ತಿದೆ. ಅಲ್ಲದೆ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ವಾಹನ ತಪಾಸಣಾ ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಮಂಗಳೂರು ಕಚೇರಿಯಲ್ಲಿ ಖಾಲಿ ಇರುವ ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಹುದ್ದೆಗಳನ್ನು ತುಂಬಲು ನಿಯಮಾನುಸಾರ ಪರಿಶೀಲಿಸಲಾಗುವುದು. ಕಚೇರಿಯಲ್ಲಿ ಒಟ್ಟು 57 ವಿವಿಧ ವೃಂದಗಳ ಹುದ್ದೆಗಳು ಖಾಲಿ ಇವೆ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಟ್ರಕ್ ಟರ್ಮಿನಲ್/ವೇ ಸೈಡ್ ಅಮಿನಿಟೀಸ್ ನಿರ್ಮಿಸುವ ಸಲುವಾಗಿ ಮಂಗಳೂರಿನ ಸುರತ್ಕಲ್ ಬಳಿಯಿರುವ ಮುಕ್ಕ ಸಸಿಹಿತ್ಲು ಮುಖ್ಯ ರಸ್ತೆಗೆ ಹೊಂದಿಕೊಂಡಂತಿರುವ ಜಮೀನನ್ನು ಗುರುತಿಸಲಾಗಿದ್ದು, ಸದರಿ ಜಮೀನನ್ನು ಭೂ-ಸ್ವಾಧೀನಪಡಿಸಿಕೊಳ್ಳಲು ಕ್ರಮವಹಿಸಲಾಗುತ್ತಿದೆ ಎಂದು ಹೇಳಿದರು.

ಮೋಟಾರು ವಾಹನಗಳ ಕಾಯ್ದೆ 1988ರ ಕಲಂ 113 ಮತ್ತು 114ನ್ನು ಉಲ್ಲಂಘಿಸಿ ಅಧಿಕ ಭಾರದ ಸರಕು ಸಾಗಣೆ ಮಾಡುವ ಪ್ರಕರಣಗಳಲ್ಲಿ ಕಾಯ್ದೆಯ ಕಲಂ 200ರ ಅಡಿಯಲ್ಲಿ ಹೆಚ್ಚುವರಿ ಭಾರದ ಸರಕು ಸಾಗಣೆ ವಾಹನಗಳಿಗೆ ದಂಡ ವಿಧಿಸಲಾಗುತ್ತಿದ್ದು, ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ಸರಕು ಸಾಗಣೆ ಮಾಡುವ ವಾಹನಗಳ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಸಾರಿಗೆ ಇಲಾಖೆಯಿಂದ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗುತ್ತಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News