ನಿರ್ದಿಷ್ಟ ಉದ್ದೇಶಕ್ಕೆ ಬಳಸದ ನಾಗರಿಕ ಸೌಲಭ್ಯ ನಿವೇಶನಗಳ ಹಂಚಿಕೆ ರದ್ದು: ಡಿಸಿಎಂ ಪರಮೇಶ್ವರ್

Update: 2018-12-19 15:57 GMT

ಬೆಳಗಾವಿ, ಡಿ.19: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ವಿವಿಧ ಸಂಘ-ಸಂಸ್ಥೆಗಳಿಗೆ ಸಾರ್ವಜನಿಕ ಸೇವಾ ಉದ್ದೇಶಗಳಿಗಾಗಿ ನೀಡಿದ ನಾಗರಿಕ ಸೌಲಭ್ಯ ನಿವೇಶನಗಳನ್ನು ನಿರ್ದಿಷ್ಟ ಉದ್ದೇಶಗಳಿಗೆ ಬಳಸದೇ ಅನ್ಯ ಉದ್ದೇಶಕ್ಕೆ ಬಳಸಿದರೆ ಅಂತಹ ಹಂಚಿಕೆಗಳನ್ನು ರದ್ದುಪಡಿಸಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯ ಎಂ.ಸಿ.ವೇಣುಗೋಪಾಲ್ ನಿಯಮ 72ರ ಅಡಿಯಲ್ಲಿ ಮಂಡಿಸಿದ್ದ, ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, ಶಿಕ್ಷಣದ ಉದ್ದೇಶಕ್ಕಾಗಿ ನಿವೇಶನ ಪಡೆದು ವಾಣಿಜ್ಯ ಚಟುವಟಿಕೆ ನಡೆಸುತ್ತಿದ್ದ, ಬೆಂಗಳೂರಿನ ಜೆ.ಪಿ.ನಗರದ ಚಿಲ್ಡ್ರನ್ ಎಜುಕೇಶನ್ ಸೊಸೈಟಿಗೆ ಹಂಚಿಕೆ ಮಾಡಿದ ನಿವೇಶನ ರದ್ದು ಪಡಿಸಲಾಗಿದೆ ಎಂದರು.

ಪ್ರಕರಣ ಈಗ ನ್ಯಾಯಾಲಯದಲ್ಲಿದೆ. ಇದೇ ರೀತಿ ಪ್ರಾಧಿಕಾರದ ಗಮನಕ್ಕೆ ಬಂದ 11 ಹಂಚಿಕೆದಾರರಿಗೆ ನೋಟಿಸ್ ನೀಡಲಾಗಿದೆ. ಅವರಿಂದ ಉತ್ತರ ಬಂದ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು. ಶಾಲೆ, ಆಸ್ಪತ್ರೆ, ಧಾರ್ಮಿಕ ಸಂಸ್ಥೆ ಮತ್ತಿತರ ಸಾರ್ವಜನಿಕ ಸೇವಾ ಚಟುವಟಿಕೆಗಳಿಗೆ ಪಡೆದ ನಿವೇಶನಗಳನ್ನು ನಿರ್ದಿಷ್ಟ ಉದ್ದೇಶಗಳಿಗೆ ಮಾತ್ರ ಬಳಸಬೇಕು ಎಂದು ಉಪಮುಖ್ಯಮಂತ್ರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News