ಆನೆಗಳ ಪ್ರವೇಶ ನಿಯಂತ್ರಣಕ್ಕೆ ರೈಲ್ವೆ ಬ್ಯಾರಿಕೇಡ್ ಅಳವಡಿಕೆ: ಸಚಿವ ಆರ್.ಶಂಕರ್

Update: 2018-12-19 17:21 GMT

ಬೆಂಗಳೂರು, ಡಿ.19: ಆನೆಗಳು ಪ್ರವೇಶಿಸುವ ತೋಟ, ಊರು, ಕೃಷಿ ಭೂಮಿಗಳ ಸುತ್ತಲೂ ರೈಲ್ವೆ ಬ್ಯಾರಿಕೇಡ್ ಹಾಕಲಾಗುವುದು ಎಂದು ಅರಣ್ಯ ಸಚಿವ ಆರ್.ಶಂಕರ್ ಹೇಳಿದ್ದಾರೆ.

ಬುಧವಾರ ಪರಿಷತ್ ನಲ್ಲಿ ಪ್ರಶ್ನೋತ್ತರ ವೇಳೆ ಬಿಜೆಪಿ ಸದಸ್ಯ ಎಂ.ಕೆ. ಪ್ರಾಣೇಶ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಊರು, ತೋಟ, ಕೃಷಿ ಭೂಮಿಗಳ ಸುತ್ತಲೂ ರೈಲ್ವೆ ಬ್ಯಾರಿಕೇಡ್ ಹಾಕಲು ಚಿಂತಿಸಲಾಗಿದೆ. ಮೂಡಿಗೆರೆ, ಕೊಪ್ಪ, ಕೊಡಗು ಸೇರಿದಂತೆ ಹಲವೆಡೆ ಆನೆಗಳು ಬಂದು ಕೃಷಿ ಭೂಮಿಗೆ ತೆರಳಿ ಬೆಳೆ ನಾಶ ಮಾಡುತ್ತಿವೆ. ಇದನ್ನು ತಡೆಯಲು ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗುವುದು ಎಂದರು.

ಇದೆ ತಿಂಗಳ 26 ರಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಗೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಕಾಡಾನೆಗಳ ದಾಳಿ, ಮಾನವ ಪ್ರಾಣ ಹಾನಿ ಕುರಿತು ಸ್ಥಳೀಯರೊಂದಿಗೆ ಖುದ್ದಾಗಿ ಚರ್ಚಿಸಿ ಸಲಹೆ ಪಡೆಯಲಾಗುವುದು. ಸಮಸ್ಯೆ ಪರಿಹಾರಕ್ಕೆ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಕೊಡಗು ಜಿಲ್ಲೆಗೂ ಕೂಡ ಭೇಟಿ ನೀಡಲಾಗುವುದು. ಮುಖ್ಯಮಂತ್ರಿಯವರು ಈ ಕಾರ್ಯಕ್ಕೆ ಸಾಕಷ್ಟು ಹಣ ಒದಗಿಸಲು ಸಿದ್ಧವಿದ್ದಾರೆ ಎಂದು

ಈ ಬಗ್ಗೆ ಮಾತನಾಡಿದ ಪ್ರಾಣೇಶ್, ಸಚಿವರು ನೀಡಿರುವ ವರದಿಯಲ್ಲಿ ಆನೆದಾಳಿಗೆ ಕುನಕಂಡು ಗ್ರಾಮ, ಉರುಬಗೆ ಗ್ರಾಮದಲ್ಲಿ ಇಬ್ಬರು ಮಾತ್ರ ಆನೆ ದಾಳಿಗೆ ಬಲಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಆನೆ ದಾಳಿಗೆ ಬಲಿಯಾದವರ ಸಂಖ್ಯೆ ನಾಲ್ಕು. ಅಧಿಕಾರಿಗಳು ಸಚಿವರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಸದನಕ್ಕೆ ಸಚಿವರು ತಪ್ಪು ಮಾಹಿತಿ ಕೊಟ್ಟಿದ್ದಾರೆ. ಮೂಡಿಗೆರೆ ತಾಲೂಕಿನಲ್ಲಿ ರೈತರ ಮೇಲೆ ಒಂಟಿ ಸಲಗ ದಾಳಿ ಮಾಡುತ್ತಿದ್ದು, ಅದನ್ನು ಕಾಡಿಗೆ ಹಿಮ್ಮೆಟ್ಟಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ಇದಕ್ಕೆ ಪ್ರತ್ಯುತ್ತರ ನೀಡಿದ ಸಚಿವರು, ಮುಡಿಗೆರೆ ತಾಲೂಕಿನಲ್ಲಿ ಒಂಟಿ ಸಲಗ ತೊಂದರೆ ಕೊಡುತ್ತಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಆನೆಯನ್ನು ಕಾಡಿಗೆ ಹಿಮ್ಮೆಟ್ಟಿಸಲು ಸಕ್ರೆಬೈಲು ಆನೆ ಬಿಡಾರದಿಂದ 2 ಸಾಕಾನೆ ನಿಯೋಜಿಸಲಾಗಿದೆ ಎಂದರು.

ಈ ವೇಳೆ ಮಾತನಾಡಿದ ಪ್ರಾಣೇಶ್, ಸಚಿವರ ಉತ್ತರ ತಪ್ಪಾಗಿದೆ. ಇವತ್ತು ಸ್ಥಳೀಯ ಅರಣ್ಯಾಕಾರಿಗಳನ್ನು ಫೋನ್ ಮೂಲಕ ಸಂಪರ್ಕಿಸಿದ್ದೆ. ಅವರು ಒಂದು ಆನೆಯಿಂದ ಒಂದೆ ದಿನ ಕಾರ್ಯಾಚರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಪುಂಡಾನೆ ಕಾಡಿಗೆ ಹಿಮ್ಮೆಟ್ಟಿಸಿಲ್ಲ. ಜನರು ಭಯಬೀತರಾಗಿದ್ದಾರೆ. ಸಚಿವವರ ಹೇಳಿಕೆ ಸಮಂಜಸವಾಗಿಲ್ಲ ಎಂದರು. ಇದಕ್ಕೆ ಬಿಜೆಪಿ ಸದಸ್ಯ ಸುನಿಲ್ ಸುಬ್ರಹ್ಮಣ್ಯ ಧ್ವನಿಗೂಡಿಸಿದರು.

ಆನೆಯನ್ನು ಸ್ಥಳಾಂತರಿಸಬೇಕು. ಪೂರ್ಣ ಪ್ರಮಾಣದ ಪರಿಹಾರ ಬೇಕು ಎಂದು ಎಂ.ಕೆ.ಪ್ರಾಣೇಶ್ ಮತ್ತು ಸುನಿಲ್ ಸುಬ್ರಹ್ಮಣ್ಯ ಸದನದ ಬಾವಿಗಿಳಿದು ಪ್ರತಿಭಟಿಸಿದರು.

ಸಚಿವರು ಮಾತನಾಡಿ, ಅಧಿಕಾರಿ ಮತ್ತು ಶಾಸಕರ ಸಭೆ ಕರೆಯಲಾಗುವುದು. ಸದಸ್ಯರ ಅಹವಾಲು ಸ್ವಿಕರಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News